ಮೈಸೂರು: ರಾಜ್ಯದ ರಾಜಕೀಯದಲ್ಲಿ ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ದೂರಿದ್ದಾರೆ.
ಘನತೆ ಇರುವ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದವರು ಕೀಳು ಮಟ್ಟದಲ್ಲಿ ಮಾತಿನ ದಾಳಿಗಿಳಿಯುವುದು ಸಲ್ಲದ ಬೆಳವಣಿಗೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಜನಹಿತಕ್ಕಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ವರುಣದ ಮಾಜಿ ಶಾಸಕ ಡಾ. ಯತೀಂದ್ರ ಅವರ ಬಗ್ಗೆ ಆಧಾರವೇ ಇಲ್ಲದೆ ಆರೋಪಗಳನ್ನು ಮಾಡುವ ಮೂಲಕ ಕುಮಾರಸ್ವಾಮಿ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹಗುರಗೊಳಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಅನೈತಿಕ ಮೈತ್ರಿಯ ಕಾರಣದಿಂದ ಯಾವುದೇ ಕಷ್ಟ ಇಲ್ಲದೇ ಚಿಕ್ಕ ವಯಸ್ಸಿನಲ್ಲೇ ಮುಖ್ಯಮಂತ್ರಿಯಾದರು. ದಕ್ಕಿದ ಅವಕಾಶವನ್ನೂ ಜನರ ಒಳಿತಿಗೆ ಬಳಸದೆ ರಾಜ್ಯಕ್ಕೆ ಮೋಸ ಮಾಡಿದರು. ಎರಡನೇ ಅವಧಿಯನ್ನೂ ಜನರು, ಶಾಸಕರು ಮತ್ತು ಮಂತ್ರಿಗಳ ಕಷ್ಟ ಆಲಿಸದೇ ಐಶಾರಾಮಿ ಜೀವನಕ್ಕೆ ಮುಡಿಪಿಟ್ಟರು. ಇದರ ಪರಿಣಾಮವನ್ನು ರಾಜ್ಯದ ಜನತೆ ಗಮನಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ವರ್ಗಾವಣೆ ದಂಧೆ ಕುರಿತಾದ ಇವರ ಪೊಳ್ಳು ಆರೋಪ, ಪೆನ್‌ಡ್ರೈವ್ ಎಂಬ ಬುಟ್ಟಿಯಲ್ಲಿನ ಹಾವಿನ ಕತೆ, ವೈಎಸ್‌ಟಿ ಟ್ಯಾಕ್ಸ್ ಎಂಬ ಹೀಯಾಳಿಕೆ ಇತ್ಯಾದಿಗಳು ಜನಪರ ಆಡಳಿತವನ್ನು ಸಹಿಸಿಕೊಳ್ಳಲಾಗದ ಅಹಮಿಕೆಯ ಪ್ರದರ್ಶನವಾಗಿದೆ. ಒಟ್ಟಾರೆಯಾಗಿ ಸರ್ಕಾರವನ್ನು ಹೇಗಾದರೂ ಮಾಡಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಷ್ಟೇ ಅವರ ಉದ್ದೇಶ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.