ಅನೈತಿಕ ಸಂಬಂಧಕ್ಕಾಗಿ ಪತಿ ಹತ್ಯೆಗೈದ ಪತ್ನಿ?

21RAVIG13_Web
Published on

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಸೇನೆಯಲ್ಲಿ ಕೆಲಸ ಮಾಡುವ ತನ್ನ ಪತಿಯ ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಿ, ಯೋಧನ ಸಹೋದರ ಮಾರಿಹಾಳ ಪೊಲೀಸ್ ಠಾಣೆಯ ಮೊರೆ ಹೋಗಿದ್ದು, ಗುರುವಾರ ದೂರು ದಾಖಲಾಗಿದೆ.

ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದ ಯೋಧ ದೀಪಕ ಪಟ್ಟಣದಾರ(32) ಹತ್ಯೆಗೀಡಾದ ವ್ಯಕ್ತಿ. ಪತ್ನಿ ಅಂಜಲಿ, ಕಾರು ಚಾಲಕ ಪ್ರಶಾಂತ ಪಾಟೀಲ, ನವೀನ ಕೆಂಗೇರಿ ಹಾಗೂ ಪ್ರವೀಣ ಹುಡೇದ ಅವರ ವಿರುದ್ಧ ಮೃತ ಯೋಧನ ಸಹೋದರ ಉದಯ ಪಟ್ಟಣದಾರ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹತ್ಯೆಗೀಡಾದ ಸ್ಥಳ ಪರಿಶೀಲನೆ ನಡೆಸಿದ್ದು, ದೀಪಕ ಅವರ ಶವ ಸೇರಿ ಇನ್ನಿತರ ಸಾಕ್ಷೃಗಳು ಪೊಲೀಸರಿಗೆ ದೊರೆತಿದ್ದು, ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ.

ಘಟನೆ ವಿವರ: ಕೊಲೆಗೀಡಾದ ಯೋಧ ದೀಪಕನ ಹೆಂಡತಿ ಅಂಜಲಿಗೂ ಹಾಗೂ ಕಾರ್ ಚಾಲಕ ಪ್ರಶಾಂತ ಪಾಟೀಲ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅದು ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಇದರಿಂದಾಗಿ ಸಂಚು ರೂಪಿಸಿದ ನಾಲ್ಕು ಜನರು ದೀಪಕನಿಗೆ ಪಾರ್ಟಿ ಮಾಡುವ ನೆಪದಲ್ಲಿ ಕಂಠಪೂರ್ತಿ ಮಧ್ಯ ಕುಡಿಸಿ, ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಬಳಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಅಲ್ಲದೆ, ಗುರುತು ಸಿಗದಂತೆ ದೇಹವನ್ನು ಮುಚ್ಚಿ ಹಾಕಿದ್ದಾರೆ ಎಂಬ ಆರೋಪವಿದೆ.

ನಾಪತ್ತೆ ದೂರು: ಫೆ. 4ರಂದು ಮಾರಿಹಾಳ ಪೊಲೀಸ್ ಠಾಣೆಗೆ ತೆರಳಿದ ಪತ್ನಿ ಅಂಜಲಿ, ಜ. 28ರಂದು ಗೆಳೆಯರ ಜತೆ ಬೆಳಗಾವಿಗೆ ಹೋಗುತ್ತೇನೆ ಎಂದು ಹೋದ ತನ್ನ ಪತಿ ಮರಳಿ ಬಂದಿಲ್ಲ ಎಂದು ದೂರು ದಾಖಲಿಸಿದ್ದಾಳೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕೊಲೆಗೀಡಾದ ಯೋಧ ದೀಪಕನ ಸಹೋದರ ಉದಯ, ತನ್ನ ತಮ್ಮ ಕೊಲೆಯಾಗಿರುವ ಕುರಿತಂತೆ ಶಂಕೆ ವ್ಯಕ್ತಪಡಿಸಿ, ದೀಪಕನ ಹೆಂಡತಿಗೂ ಮತ್ತು ಕಾರ್ ಡ್ರೈವರ್‌ಪ್ರಶಾಂತ ಪಾಟೀಲಗೂ ಅನೈತಿಕ ಸಂಬಂಧವಿತ್ತು. ಅದು ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಜ. 28ರಂದು ದೀಪಕನ ಹೆಂಡತಿ ಅಂಜಲಿ, ಕಾರ್ ಡ್ರೈವರ್ ಪ್ರಶಾಂತ ಪಾಟೀಲ ಮತ್ತು ಆತನ ಇನ್ನಿಬ್ಬರು ಗೆಳೆಯರು ದೀಪಕನನ್ನು ಪುಸಲಾಯಿಸಿ ಕರೆದೊಯ್ದು, ಗೊಡಚಿನಮಲ್ಕಿ ಬಳಿಯ ಅರಣ್ಯದಲ್ಲಿ ಆತನಿಗೆ ಮಧ್ಯ ಕುಡಿಸಿ ಬಳಿಕ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದನು.

ಯೋಧನ ಸಹೋದರ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಗೊಡಚಿನಮಲ್ಕಿಯಲ್ಲಿ ದೀಪಕನ ಶವ ಮುಚ್ಚಿ ಹಾಕಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಲೆ ಬುರುಡೆ, ಪರ್ಸ್, ಐಡಿ ಕಾರ್ಡ್ ಸೇರಿ ಇನ್ನಿತರ ಕುರುಹುಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net