

ಹೊಳೆನರಸೀಪುರ: ಪ್ರಯಾಣದ ವೇಳೆ ಸಂಯಮದಿಂದ ವರ್ತಿಸುವ ಮೂಲಕ ಸ್ವಸ್ಥಾನ ತಲುಪಿ ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ವಲಸೆ ಕಾರ್ಮಿಕರಿಗೆ ಸಲಹೆ ನೀಡಿದರು.
ಸೇವಾ ಸಿಂಧುಗೆ ಅರ್ಜಿ ಸಲ್ಲಿಸಿದ್ದ ಬಿಹಾರ ಮೂಲದ 66 ವಲಸೆ ಕಾರ್ಮಿಕರಿಗೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಭಾನುವಾರ ಅನುಮತಿ ಪತ್ರ ವಿತರಿಸಿ ಮಾತನಾಡಿದ ಅವರು, ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ಇನ್ನೂ ಅನುಮತಿ ದೊರೆಯದ ಕಾರಣ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಇದಕ್ಕೂ ಮುನ್ನ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಲಾಯಿತು. ಎರಡು ಬಸ್‌ನಲ್ಲಿ ಹಾಸನಕ್ಕೆ ತೆರಳಿದ ಕಾರ್ಮಿಕರು, ಅಲ್ಲಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಮಂಗಳಗೌರಿ, ಹಿರಿಯ ಶುಶ್ರೂಷಾಧಿಕಾರಿ ಉಷಾ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ಶಾಜೀಯಾ ಷರೀಫ್, ಗ್ರಾಮಂತರ ಠಾಣೆ ಪಿಎಸ್ಸೈ ಮೋಹನ ಕೃಷ್ಣ, ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮಲೆಕ್ಕಾಧಿಕಾರಿಗಳಾದ ಹರೀಶ್ ಬಣಕರ್ , ಉದಯ್ ಇತರರು ಇದ್ದರು.