ಬೆಂಗಳೂರಿಗೆ ತೆರಳಿದ ವಲಸೆ ಕಾರ್ಮಿಕರು

CAN_5391
Published on

ಮೈಸೂರು: ಲಾಕ್‌ಡೌನ್ ಸಡಿಲವಾದರೂ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಕಾರ್ಯಾರಂಭಗೊಳ್ಳದ ಹಿನ್ನೆಲೆಯಲ್ಲಿ ಬುಧವಾರ 220 ವಲಸೆ ಕಾರ್ಮಿಕರು ನಗರದಿಂದ ತಮ್ಮ ಊರಿಗೆ ತೆರಳಿದರು.

ಆರ್ಥಿಕ ಚಟುವಟಿಕೆ ಮೊದಲಿನಂತೆ ಚೇತರಿಸಿಕೊಳ್ಳದ ಹಾಗೂಉದ್ಯೋಗ ಕಡಿತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ವಲಸೆ ಕಾರ್ಮಿಕರು ತಮ್ಮ ಊರಿನತ್ತ ಪ್ರಯಣ ಬೆಳೆಸಿದರು.

ಊರಿಗೆ ತೆರಳುವ ವಲಸೆ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅವರನ್ನು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಸಂಜೆ ಬೆಂಗಳೂರಿನಿಂದ ಶ್ರಮಿಕ್ ರೈಲಿನ ಮೂಲಕ ಜಾರ್ಖಂಡ್ ಮತ್ತು ಉತ್ತರಾಖಂಡ್‌ಗೆ ಪ್ರಯಾಣ ಬೆಳೆಸಿದರು.

ಮೇ 16 ಮತ್ತು 17ರಂದು ನಗರದಿಂದ ಶ್ರಮಿಕ್ ರೈಲಿನ ಮೂಲಕ ಉತ್ತರ ಪ್ರದೇಶಕ್ಕೆ 2,800 ವಲಸೆ ಕಾರ್ಮಿಕರು ತೆರಳಿದ್ದರು. ಅದೇ ರೀತಿ ಶ್ರಮಿಕ್ ರೈಲಿನಲ್ಲಿ ತೆರಳಲು 220 ವಲಸೆ ಕಾರ್ಮಿಕರು ಸೇವಾ ಸಿಂಧು ಅ್ಯಪ್ ಮೂಲಕ ಹೆಸರು ನೋಂದಾಯಿಸಿಕೊಂಡಿ ದ್ದರು. ಆದರೆ, ಅವರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಬಸ್‌ನಲ್ಲಿ ಕಳುಹಿಸಿ ನಂತರ ಬೆಂಗಳೂರಿನಿಂದ ಶ್ರಮಿಕ್ ರೈಲಿನ ಮೂಲಕ ಕಳುಹಿಸಿಕೊಡಲಾಯಿತು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ನೇತೃತ್ವದಲ್ಲಿ ನಡೆಸಿ ಪ್ರಮಾಣ ಪತ್ರ ನೀಡಲಾಯಿತು. ಜಿಲ್ಲೆಯ ವಿವಿಧ ಕಾರ್ಖಾನೆ ಹಾಗೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರ ವಲಸೆ ಕಾರ್ಮಿಕರ ಜತೆಗೆ ಕೆಲವು ವಿದ್ಯಾರ್ಥಿಗಳು ಪ್ರಯಾಣ ಬೆಳೆಸಿದರು. 3 ಬಸ್‌ಗಳಲ್ಲಿ ಜಾರ್ಖಂಡ್‌ನ 102 ಕಾರ್ಮಿಕರು, 4 ಬಸ್‌ಗಳಲ್ಲಿ ಉತ್ತರಖಾಂಡ್‌ನ 118 ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು.

ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ತಮಣ್ಣ, ಎನ್‌ಆರ್ ಠಾಣೆ ಇನ್ಸ್‌ಪೆಕ್ಟರ್ ಜಿ.ಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net