ಶನಿವಾರಸಂತೆಯಲ್ಲಿ ಗೌರಿ-ಗಣೇಶ ಮೂರ್ತಿ ವಿಸರ್ಜನೆ

ಶನಿವಾರಸಂತೆಯಲ್ಲಿ ನಡೆದ  ಗೌರಿ ಗಣೇಶ ಮೂರ್ತಿ ಮೂರ್ತಿ ಮೆರವಣಿಗೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
ಶನಿವಾರಸಂತೆಯಲ್ಲಿ ನಡೆದ ಗೌರಿ ಗಣೇಶ ಮೂರ್ತಿ ಮೂರ್ತಿ ಮೆರವಣಿಗೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
Published on

ಶನಿವಾರಸಂತೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ತ್ಯಾಗರಾಜ ಕಾಲನಿಯ ಶ್ರೀ ವಿಜಯ ವಿನಾಯಕ ಸೇವಾ ಸಮಿತಿಯಿಂದ ಎರಡು ತಿಂಗಳ ಹಿಂದೆ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯನ್ನು ಶನಿವಾರ ರಾತ್ರಿ ವಿಸರ್ಜಿಸಲಾಯಿತು.

ಗೌರಿ-ಗಣೇಶ ವಿಸರ್ಜನೋತ್ಸವ ಪ್ರಯುಕ್ತ ವಿಶೇಷ ಪೂಜೆ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಅರ್ಚಕರು ನೆರವೇರಿಸಿದರು. ಮಧ್ಯಾಹ್ನದ ನಂತರ ಗೌರಿ ಗಣೇಶ ಮೂರ್ತಿಯನ್ನು ಅಲಂಕರಿಸಿದ ಮಂಟಪದಲ್ಲಿ ಕೂರಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಪಟ್ಟಣದ ಮುಖ್ಯರಸ್ತೆ, ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು.

ಆಕರ್ಷಕ ಮತ್ತು ರಂಗುರಂಗಿನ ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ದುಷ್ಟಶಕ್ತಿಯ ಸಂಹಾರ ಬಿಂಬಿಸುವ ಟ್ಯಾಬ್ಲೊ ಪ್ರದರ್ಶನ, ಗೊಂಬೆ ಕುಣಿತ, ನಾಸಿಕ್ ಡೋಲು ಕಣ್ಮನ ಸೆಳೆದವು. ಮೆರವಣಿಗೆ ಸಂದರ್ಭ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ಮೆರವಣಿಗೆಯನ್ನು ಸ್ಥಗಿತಗೊಳಿಸಲಾಯಿತು. ಮಳೆ ವಿರಾಮ ನೀಡಿದ ಮೇಲೆ ಮತ್ತೆ ಶೋಭಾಯಾತ್ರೆಯನ್ನು ಮುಂದುವರಿಸಲಾಯಿತು.

ಸಾವಿರಾರು ಭಕ್ತರು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ರಾತ್ರಿ 10 ಗಂಟೆಗೆ ಕಾಜೂರು ಹೊಳೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅದ್ದೂರಿ ಗಣೇಶೋತ್ಸವ ಸಂಪನ್ನಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿ ವತಿಯಿಂದ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಮಧು ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net