ಬೃಹತ್ ಗಣೇಶ ಮೂರ್ತಿ ವಿಸರ್ಜನೆ

12pnd6
ಪಾಂಡವಪುರದಲ್ಲಿ ಆಯೋಜಿಸಿದ್ದ ಗಣೇಶಮೂರ್ತಿ ಉತ್ಸವಕ್ಕೆ ಮಾಜಿ ಸಚಿವ ಸಿ.ಎಸ್‌ಪುಟ್ಟರಾಜು ಅವರು ರಥ ಸಾರಥಿಯಾಗುವ ಮೂಲಕ ಚಾಲನೆ ನೀಡಿದರು.
Published on

ಪಾಂಡವಪುರ: ಪಟ್ಟಣದ ಹಳೇ ಬಸ್ ಸಿದ್ಧ್ದಿ ವಿನಾಯಕ ಸೇವಾ ಸಮಿತಿಯಿಂದ 45 ದಿನಗಳ ಹಿಂದೆ ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಣೇಶ ಮೂರ್ತಿಯನ್ನು ಭಾನುವಾರ ವಿವಿಧ ಜಾನಪದ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.

ಗಣೇಶಮೂರ್ತಿ ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಗಣೇಶಮೂರ್ತಿಗೆ ಪುಷ್ಪಾರ್ಚನೆ ಮಾಡಿ ಉತ್ಸವದ ವಾಹನಕ್ಕೆ ಸಾರಥಿಯಾಗುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಸಿದ್ಧಿವಿನಾಯಕ ಸೇವಾ ಸಮಿತಿ 45ನೇ ವರ್ಷದ ಅಂಗವಾಗಿ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, 45 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿ, ಪ್ರತಿನಿತ್ಯ ವಿಶೇಷಪೂಜೆ, ಹೋಮ, ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದರು. ಗಣೇಶ ಮೂರ್ತಿ ವಿಸರ್ಜನೆ ಎರಡು ದಿನಗಳ ಮುನ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭಾನುವಾರ ಮಧ್ಯಾಹ್ನ ಆರಂಭಗೊಂಡ ಗಣೇಶಮೂರ್ತಿ ಮೆರವಣಿಗೆ ಉತ್ಸವದಲ್ಲಿ ಗಣೇಶಮೂರ್ತಿಯ ಜತೆಗೆ ಈಶ್ವರ, ಭದ್ರಕಾಳಿ ಮೂರ್ತಿಗಳನ್ನು ಸಹ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿಶೇಷವಾಗಿ ಇದೇ ಮೊದಲ ಬಾರಿಗೆ ಕರೆಸಿದ್ದ ಮಹಾರಾಷ್ಟ್ರದ ನಾಸಿಕ್ ಡೋಲು ಕಲಾ ತಂಡ ಗಮನ ಸೆಳೆಯಿತು. ಹುಲಿವೇಷ, ವೀರಗಾಸೆ ಕುಣಿತ, ಕೋಳಿಕುಣಿತ, ಮಹಿಳೆಯರು ವೀರಗಾಸೆ ಕುಣಿತ, ಮಂಗಳವಾಧ್ಯ, ಡೋಲು, ಕಾಳಿಕುಣಿತ ಜತೆಗೆ ವಿಶೇಷವಾಗಿ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಮನಸೂರೆಗೊಂಡವು.

ಹಳೇಬಸ್ ನಿಲ್ದಾಣದ ಗಣಪತಿ ಪೆಂಡಾಲ್‌ನಿಂದ ಆರಂಭಗೊಂಡ ಮೆರವಣಿಗೆ ಪೇಟೆಬೀದಿ ಮಾರ್ಗವಾಗಿ ಚಲಿಸಿ ಅಂತಿಮವಾಗಿ ವಿಸಿ ನಾಲೆಯಲ್ಲಿ ಕ್ರೇನ್‌ಮೂಲಕ ಬೃಹತ್ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.

ನಾಲೆಗೆ ನೀರು ಬಿಡಿಸಿದ ಸಿಎಸ್‌ಪಿ: ತಾಲೂಕಿನಲ್ಲಿ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಸಿ ನಾಲೆಯ ನೀರು ನಿಲ್ಲಿಸಿದ್ದರು. ಇದರಿಂದ ಗಣಪತಿ ವಿಸರ್ಜನೆ ಮಾಡಲು ಸಮಿತಿಯ ಸದಸ್ಯರು ಪಜೀತಿಗೆ ಸಿಲುಕಿದ್ದರು. ಈ ವೇಳೆ ಸಮಿತಿಯ ಸದಸ್ಯರು ಸಿ.ಎಸ್.ಪುಟ್ಟರಾಜು ಅವರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಸಿ ನಾಲೆಗೆ ನೀರು ಹರಿಸುವ ಮೂಲಕ ಗಣಪತಿ ವಿಸರ್ಜನೆಗೆ ಸಹಕಾರಿಯಾಗಿದರು. ಮೆರವಣಿಗೆಯಲ್ಲಿ ಸಮಿತಿಯ ಸುಬ್ರಹ್ಮಣ್ಯ, ಮನೋಜ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net