

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಕುಂಭಕೋಣಂ ಪ್ಲಾಟ್ ಬಳಿ ಜಿಮಖಾನ ಮೈದಾನದ ಎದುರು ಸೋಮವಾರ ಜಿಯೋ ಕಂಪನಿಯ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ವೇಳೆ 24/7 ಪೈಪ್ಲೈನ್ಗೆ ಹಾನಿಯಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಜಿಯೋ ಕಂಪನಿ ಅಂತರ್ಜಾಲದ ಭೂಗತ ಕೇಬಲ್ ಅಳವಡಿಕೆ ಕಾರ್ಯ ಆರಂಭಿಸಿದೆ. ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಗುಂಡಿ ಅಗೆಯದೇ ಯಂತ್ರ ಹಾಗೂ ಸೆನ್ಸಾರ್ ಮೂಲಕ ಪೈಪ್ಲೈನ್ ಅಳವಡಿಸುವ ತಂತ್ರಜ್ಞಾನ ಇದಾಗಿದೆ. ಈ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗಿದೆ. ಹೀಗಿದ್ದರೂ ಹಲವು ಗಂಟೆಗಳ ಕಾಲ ಜಲಮಂಡಳಿಗೆ ಮಾಹಿತಿ ನೀಡದ ಕಾರಣ ಹೆಚ್ಚು ನೀರು ಪೋಲಾಗಿತ್ತು.
ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಭೂಗತ ಕೇಬಲ್ ಕಾಮಗಾರಿಗೆ ಜಿಯೋ ಕಂಪನಿಯವರು ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅನುಮತಿ ದೊರೆತಿಲ್ಲ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುವ ಕಾರಣ ಕೆಲಸ ಆರಂಭಿಸಿದ್ದಾರೆ ಎಂದು ಪಾಲಿಕೆ ಕಿರಿಯ ಇಂಜಿನಿಯರ್ ಪಡಿಯಪ್ಪ ತಿಳಿಸಿದರು.
ಅನುಮತಿ ಪಡೆದಿಲ್ಲ
ಭೂಗತ ಕೇಬಲ್ ಅಳವಡಿಕೆಗೆ ಜಿಯೋ ಕಂಪನಿ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿದ್ದರಿಂದ ಅವಘಡ ಸಂಭವಿಸಿದೆ. ಅನುಮತಿ ಪಡೆದಿದ್ದರೆ ಸಂಬಂಧಪಟ್ಟ ಇಲಾಖೆಯವರು ಪೈಪ್ಲೈನ್ಗಳ ಕುರಿತು ಮಾಹಿತಿ ನೀಡುತ್ತಿದ್ದರು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಲಾಗುವುದು
ಜಿಯೋ ಕಂಪನಿಯವರು ಭೂಗತ ಕೇಬಲ್ ಅಳವಡಿಕೆಗೆ ಅನುಮತಿ ಪಡೆದಿದ್ದಾರೆಯೇ ಎಂಬ ಕುರಿತು ಪರಿಶೀಲಿಸಲಾಗುವುದು. ಅನುಮತಿ ಪಡೆಯದೇ ಕೆಲಸ ಆರಂಭಿಸಿದ್ದರೆ, ಪ್ರಕರಣ ದಾಖಲಿಸಲಾಗುವುದು. ಹಾನಿಯಾದ ಖರ್ಚು ಅವರಿಂದ ಭರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.