

ನಾವೇನು ಮುಖ್ಯ ಇಂಜಿನಿಯರ್ ಕಚೇರಿ ದರೋಡೆ ಮಾಡಲು ಬಂದಿಲ್ಲ. ಇದು ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವ ಕಚೇರಿಯಾಗಿದ್ದರೆ ಕೂಡಲೇ ನದಿಗೆ ಹರಿಸುವ ನೀರು ನಿಲ್ಲಿಸಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಬುಧವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇಲ್ಲವೇ ಕಚೇರಿ ಬಾಗಿಲು ಮುಚ್ಚಿ ಮನೆಗೆ ಹೋಗಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಂತೆ ಕಾಣುತ್ತಿದೆ. ನೀರು ಖಾಲಿ ಮಾಡಿ ಸಭೆ ನಡೆಸುವ ನಾಟಕವಾಡುತ್ತಿದೆ. ಮಂತ್ರಿಗಳು ರೈತರಿಗೆ ಕಟ್ಟು ನೀರು ಹರಿಸುತ್ತೇವೆಂದು ಪಾಠ ಹೇಳುತ್ತಾರೆ. ಆದರೆ ತಮಿಳುನಾಡಿಗೆ ನಿರಾಯಾಸವಾಗಿ ನೀರು ಬಿಡುತ್ತಿದ್ದಾರೆ. ಇದು ರಾಜ್ಯದ ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.
ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ ರಾಜ್ಯದ ರೈತರನ್ನು ಉಳಿಸಬೇಕು. ಕಾವೇರಿ ಭಾಗದ ರೈತರ ಮರಣ ಶಾಸನ ತಪ್ಪಿಸಬೇಕು. ನೀರು ನಿಲ್ಲಿಸದಿದ್ದರೆ ರಾಜ್ಯವ್ಯಾಪಿ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.