ದೊಡ್ಮನೆ ಸಹಕಾರಿಯಿಂದ ತಕ್ಷಣವೇ ವಜಾಗೊಳಿಸಿ

protest-fist-sketch-22337688
Published on

ಶಿರಸಿ: ಸಿದ್ದಾಪುರ ತಾಲೂಕಿನ ರ್ಕಮಕ್ಕಿ ದೊಡ್ಮನೆ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿದ್ದ ಸುಬ್ರಾಯ ಭಟ್ ಅವರು ಹಾಗೂ ನಿರ್ದೇಶಕ ವಿವೇಕ ಭಟ್ ಅವರ ವಿರುದ್ಧ ಸಂಘವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಅನರ್ಹಗೊಳಿಸಲಾಗಿದೆ. ಆದಾಗ್ಯೂ ಅವರು ಈ ಸ್ಥಾನದಲ್ಲಿ ಮುಂದುವರಿದಿದ್ದು, ಸಂಘಕ್ಕೆ ಆಗಬಹುದಾದ ಇನ್ನೂ ಹೆಚ್ಚಿನ ಹಾನಿ ತಪ್ಪಿಸುವ ಸಲುವಾಗಿ ಅವರನ್ನು ತಕ್ಷಣಕ್ಕೆ ವಜಾ ಮಾಡಬೇಕು ಎಂದು ಸದಸ್ಯರಾದ ಶಾಂತಕುಮಾರ ಭಟ್, ಆನಂದ ಗೌಡ ಹಾಗೂ ಪ್ರಕಾಶ ಹೆಗಡೆ ಇತರರು ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸುಬ್ರಾಯ ಭಟ್ಟ ಗಡಿಹಿತ್ಲು ಹಾಗೂ ನಿರ್ದೇಶಕರಾದ ವಿವೇಕ ಭಟ್ಟ ಗಡಿಹಿತ್ಲು ಅವರ ವಿರುದ್ಧ ಸಂಘದಲ್ಲಿ ಹಾನಿ ಮಾಡಿದ ಆರೋಪದ ಮೇಲೆ ಸಹಕಾರ ಸಂಘದ ಕಾಯ್ದೆ ಕಲಂ 29(ಸಿ) ಅನ್ವಯ ಸಹಾಯಕ ನಿಬಂಧಕರು 2024ರ ಅಕ್ಟೋಬರ್ 11ರಂದು ಇಬ್ಬರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಈ ತೀರ್ಪು ಪ್ರಶ್ನಿಸಿ ಎದುರುದಾರರು ಉಪನಿಬಂಧಕರಲ್ಲಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 27ರಂದು ಸಹಾಯಕ ನಿಬಂಧಕರ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ಬಂದಿತ್ತು.

ಉಪನಿಬಂಧಕರ ಆದೇಶವನ್ನು ಪ್ರಶ್ನಿಸಿ, ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ನಾವೆಲ್ಲ ಸದಸ್ಯರು ಸಲ್ಲಿಸಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿ 2025ರ ಏಪ್ರಿಲ್ 29ರಂದು ಹೈಕೋರ್ಟ್ ಉಪನಿಬಂಧಕರ ಆದೇಶ ರದ್ದುಗೊಳಿಸಿ ಆದೇಶ ನೀಡಿದೆ.

ಹೈಕೋರ್ಟ್ ಆದೇಶ ನೀಡಿ ತಿಂಗಳ ಮೇಲಾದರೂ ಇನ್ನೂ ಅನರ್ಹಗೊಂಡಿರುವ ಇಬ್ಬರು ನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ. ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಿದ್ದರೂ ಸಂಸ್ಥೆಯಲ್ಲಿ ತಮ್ಮ ಅಧಿಕಾರ ಬಳಸಿ ಹಣಕಾಸಿನ ವ್ಯವಹಾರಗಳು ಮತ್ತು ಇನ್ನಿತರ ವ್ಯವಹಾರಗಳಿಗೆ ಸಹಿ ಮಾಡುತ್ತಿದ್ದಾರೆ.

ಇದು ಕಾನೂನು ಬಾಹಿರವಾಗಿರುವುದರಿಂದ, ಈ ಕುರಿತಂತೆ ಈಗಾಗಲೇ ಸೂಕ್ತ ಕ್ರಮವಿಡಲು ಸಹಾಯಕ ನಿಬಂಧಕರಿಗೆ ಮತ್ತು ಕೆಡಿಸಿಸಿ ಬ್ಯಾಂಕ್​ಗೆ ಮನವಿ ಮಾಡಲಾಗಿದೆ. ಈಗಾಗಲೇ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಈ ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಮನೆ ಗ್ರೂಪ್ ಗ್ರಾಮಗಳ ಸಹಕಾರಿ ಸಂಘದ ಸದಸ್ಯರಾದ ಪ್ರಕಾಶ ರಾಮಚಂದ್ರ ಹೆಗಡೆ, ಆನಂದ ಗೌಡ ದೊಡ್ಮನೆ, ಮಹೇಶ ನಾಯ್ಕ ದೊಡ್ಮನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net