

ಮೈಸೂರು: ಮೈಸೂರು ಅರಮನೆಗೆ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಲೀಡರ್ ಆಗಿದ್ದು ಅರಮನೆ ದಿವಾಳಿ ಆಗುತ್ತಿದೆ. ಕೂಡಲೇ ಅರಮನೆ ಆಡಳಿಗೆ ಕೆಎಎಸ್ ಅಧಿಕಾರಿಯನ್ನು ನೇಮಿಸಿ ಅರಮನೆ ಉಳಿಸಿಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ಅರಮನೆ ಮಂಡಳಿಗೆ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು 2013ರಲ್ಲಿಯೇ ಆದೇಶವಾಗಿದೆ. ಆದರೆ, ಆದೇಶ ಇನ್ನೂ ಜಾರಿಯಾಗಿಲ್ಲ. ಅರಮನೆಗೆ ಸುಬ್ರಹ್ಮಣ್ಯ ಲೀಡರ್ ಆಗಿರುವ ಹಿನ್ನೆಲೆಯಲ್ಲಿ ಅರಮನೆ ದಿವಾಳಿ ಆಗುತ್ತಿದೆ. ಹಾಗಾಗಿ ಅರಮನೆ ನಿರ್ವಹಣೆ ಜವಾಬ್ದಾರಿಯನ್ನು ಮೈಸೂರು ರಾಜಮನೆತನಕ್ಕೆ ನೀಡುವುದು ಒಳ್ಳೆಯದ್ದು. ಅರಮನೆ ನೋಡಲು ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇದನ್ನ ಕೇಳುವವರೇ ಯಾರು ಇಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯಿತು. ಇದೀಗ ಅರಮನೆ ದಿವಾಳಿ ಆಗುತ್ತಿದೆ. ಮೈಸೂರು ಅರಮನೆಗೆ ವಿಶ್ವ ವಿಖ್ಯಾತ ಮನ್ನಣೆ ಇದೆ. ಆದರೆ ಮೂರು ಜನ ಗುಂಪು ಕಟ್ಟಿಕೊಂಡು ದಸರಾ ಆಚರಣೆ ಮಾಡುತ್ತಾರೆ. ಎಲ್ಲ ಕಡೆ ಸಿದ್ದರಾಮಯ್ಯ ಶಿಷ್ಯರೇ ಕುಳಿತು ಹಾಳು ಮಾಡಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ ಇನ್ನೇನು ಉದ್ದಾರ ಮಾಡ್ತೀರಾ? ಸರ್ಕಾರ ಅರಮನೆ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಆಶ್ರಯ ಸಮಿತಿಯ ಮನೆಗಳು ಶಾಸಕರ ಹಂತದಲ್ಲೇ ಮಾರಾಟ ಆಗುತ್ತಿವೆ. ಕಾಮಗಾರಿಯಲ್ಲಿ ಸಚಿವರಿಗೆ ಶೇ.10 ರಷ್ಟು ಕಮಿಷನ್ ಹೋಗುತ್ತಿದೆ. ಕೆಲಸ ಮುಗಿಸುವವರೆಗೆ ಶೇ.25 ರಷ್ಟು ಕಮಿಷನ್ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನು ನೀಡಿ ರಾಜ್ಯವನ್ನು ಹರಾಜು ಹಾಕಿದ್ದಾರೆ. ಎಲ್ಲ ಭಾಗ್ಯಗಳನ್ನು ಹೆಂಗಸರಿಗೆ ಕೊಟ್ಟು, ಮದ್ಯದ ದರ ಹೆಚ್ಚು ಮಾಡಿ ಕುಡಿಯೋರು ಕಡಿಮೆ ಆಗಲಿ ಅಂತ ಮಾಡಿದ್ದೇವೆ ಎನ್ನುತ್ತಾರೆ. ನೀವೇನೋ ಹುಚ್ಚ ಅಂದರೆ ಜನರು ಹುಚ್ಚರಾ ಎಂದು ಕಿಡಿಕಾರಿದರು.
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವು ಶಾಸಕರುಗಳು ಸ್ಪರ್ಧಿಸಿದ್ದಾರೆ. ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ. ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಇದ್ದಾರೆ. ಸಹಕಾರ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ಹಿಡಿತ ತಪ್ಪಿಸಬೇಕು, ಕಾಂಗ್ರೆಸ್‌ನ ಅಧಿಕಾರಕ್ಕೆ ತರಬೇಕು ಅಂತ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ. ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತದೆ. ಅದಕೋಸ್ಕರ ಶಾಸಕರನ್ನೇ ನಿಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಕುಟುಂಬವನ್ನು ಮುಗಿಸೋದು ಸಿಎಂ ಪ್ಲಾನ್ ಆಗಿದೆ ಎಂದು ಆರೋಪಿಸಿದರು.