ಮೈಸೂರಿನ ಇಮ್ಮಾವು-ತಾಂಡ್ಯ ಕೈಗಾರಿಕೆ ಅಭಿವೃದ್ಧಿಗೆ ಗ್ರಹಣ

29
Published on

ಆರ್.ಕೃಷ್ಣ ಮೈಸೂರು

ಮಹತ್ವಾಕಾಂಕ್ಷೆಯ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾದ ಇಮ್ಮಾವು ಮತ್ತು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಕೈಗಾರಿಕೆಗಳು ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಕೈಗಾರಿಕೆ ಆರಂಭಿಸುವ ಸಲುವಾಗಿ ಲಕ್ಷಾಂತರ ರೂ.ನೀಡಿ ಭೂಮಿ ಖರೀದಿಸಿದ ಕೈಗಾರಿಕೋದ್ಯಮಿಗಳು ಭೂಮಿ ಪಡೆದು ಮೂರು ವರ್ಷವಾದರೂ ಕಾಮಗಾರಿ ಆರಂಭಗೊಂಡಿಲ್ಲ.

ಭೂ ಮಾಲೀಕರು ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಉದ್ಯಮಿಗಳು ಕೈಗಾರಿಕೆ ಆರಂಭಿಸಲು ಕಾಮಗಾರಿ ಆರಂಭಿಸಿದರೆ ರೈತ ಮುಖಂಡರು, ಭೂಮಿ ಕಳೆದುಕೊಂಡವರ ಪ್ರತಿಭಟನೆ ಎದುರಿಸಬೇಕಾಗುತ್ತದೆ.

ಇದರಿಂದ ಕೈಗಾರಿಕೋದ್ಯಮಿಗಳು ದಾರಿ ಕಾಣದೆ ಕೈಕಟ್ಟಿ ಕುಳಿತಿದ್ದಾರೆ. ಅಧಿಕಾರಿಗಳು ಅಸಹಾಯಕರಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವ ಕ್ಷೇತ್ರ ವರುಣ ವ್ಯಾಪ್ತಿಗೆ ಬರುವ ಇಮ್ಮಾವು-ತಾಂಡ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಗ್ರಹಣ ಹಿಡಿದಂತಾಗಿದೆ.

ಉದ್ಯಮಿಗಳು ನಂಜನಗೂಡಿನ ಸ್ಥಳೀಯ ನ್ಯಾಯಾಲಯದಲ್ಲಿ ಇಂಜಂಕ್ಷನ್ ಅರ್ಡರ್ ಸಹ ಪಡೆದಿದ್ದಾರೆ. ಈ ಆದೇಶವನ್ನು ಪಾಲಿಸುವಂತೆ, ಉದ್ಯಮಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದರೂ ಅದೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಉದ್ಯಮಿಗಳು ಕೈಗಾರಿಕೆ ಆರಂಭಿಸುವುದು ಇರಲಿ ಕಟ್ಟಡ ಕಾಮಗಾರಿ ನಡೆಸಲು ಸ್ಥಳೀಯರು ಬೆದರಿಕೆ ಹಾಕಿ ನಿರಂತರ ಅಡ್ಡಿಪಡಿಸುತ್ತಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಿ ಆಕಾಂಕ್ಷಿಗಳಿಂದ ಹಣ ಪಡೆದುಕೊಂಡಿದೆ. ಹಣಕೊಟ್ಟು ಭೂಮಿ ಖರೀದಿಸಿದ ಕೈಗಾರಿಕೋದ್ಯಮಿಗಳು ಕೈಗಾರಿಕೆ ಆರಂಭಿಸಲು ಮುಂದಾದರೂ ಭೂ ಮಾಲೀಕರು, ವಿವಿಧ ರೈತ ಸಂಘಟನೆ ಮುಖಂಡರು ಕೈಗಾರಿಕೆ ಆರಂಭಿಸಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಕೈಗಾರಿಕೋದ್ಯಮಿಗಳು ಕೈಗಾರಿಕೆ ಆರಂಭಿಸಬೇಕು ಎನ್ನುವ ಆಸೆಯನ್ನು ಕೈ ಚೆಲ್ಲಿದ್ದಾರೆ.

ಮೂರು ವರ್ಷಗಳ ಹಿಂದೆಯೇ ಮಂಜೂರು:

ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಹಂಚಿಕೆ ಸಮಿತಿ ಸುಮಾರು 100ಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಅನುಷ್ಠಾನಕ್ಕಾಗಿ ಮೂರು ವರ್ಷಗಳ ಹಂಚಿಕೆ ಮಾಡಿದೆ.

ಒಂದು ಎಕರೆ, ಅರ್ಧ ಎಕರೆ, ಕಾಲು ಎಕರೆಯಂತೆ ಮೂರು ವಿಭಾಗ ಮಾಡಲಾಗಿದೆ. ಒಂದು ಎಕರೆಗೆ 65ರಿಂದ ಒಂದು ಕೋಟಿ ರೂ., ಅರ್ಧ ಎಕರೆಗೆ 50 ಲಕ್ಷ ರೂ., ಕಾಲು ಎಕರೆಗೆ 25 ಲಕ್ಷ ರೂ.ದರ ನಿಗದಿಪಡಿಸಲಾಗಿದೆ. ಎಸ್‌ಟಿ, ಎಸ್‌ಟಿ ಉದ್ಯಮಿಗಳಿಗೆ ದರಲ್ಲಿ ಶೇ.50ರಷ್ಟು, ಮಹಿಳಾ ಉದ್ಯಮಿಗಳಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗಿದೆ. ಒಟ್ಟು 1085.96 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಗುರುತಿಸಲಾಗಿದೆ.

ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯ:

ಕೈಗಾರಿಕೆಗಾಗಿ ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ರೈತರ ಬೇಡಿಕೆಗೆ ಮಣಿದ ಸರ್ಕಾರ ಹೆಚ್ಚಿನ ಪರಿಹಾರವನ್ನು ಘೋಷಿಸಿದೆ. ಆದರೆ ಅದು ನಿಜವಾಗಿ ಭೂಮಿ ಕಳೆದುಕೊಂಡ ರೈತರಿಗೆ ಧಕ್ಕದೆ ಪ್ರಭಾವಿ ರಾಜಕಾರಣಿಗಳಿಂದಾಗಿ ಹಿಂಬಾಲಕರು, ಮಧ್ಯವರ್ತಿಗಳ ಪಾಲಾಗಿದೆ ಎನ್ನುವ ಆರೋಪವಿದೆ. ಇದರಿಂದ ಭೂಮಿ ಕಳೆದುಕೊಂಡ ನೈಜ ಮಾಲೀಕರಿಗೆ ಪರಿಹಾರ ಕೊಡಬೇಕು, ಅಲ್ಲದೇ ಕುಟುಂಬಕ್ಕೆ ಉದ್ಯೋಗ ನೀಡಬೇಕು ಎನ್ನುವ ಬೇಡಿಕೆ ಇಟ್ಟು ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಕೈಗಾರಿಕೆಗಳ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.

ಇ-ಖಾತಾ ಗೊಂದಲ:

ಮತ್ತೊಂದೆಡೆ ಲೀಸ್ ಕಂ ಸೇಲ್ ಒಪ್ಪಂದ ನೋಂದಾಯಿಸಲು ಇ-ಖಾತಾ ಕಡ್ಡಾಯವಾಗಿದೆ. ಇ-ಖಾತಾ ಮಾಡಿಕೊಡುವಂತೆ ಕೆಐಎಡಿಬಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದೆ. ಆದರೆ ಸರಿಯಾದ ಆಸ್ತಿ ತೆರಿಗೆ ಪಾವತಿಸಿದರೂ ಇ-ಖಾತಾ ನೀಡಲು ಗ್ರಾಮ ಪಂಚಾಯಿತಿಗಳು ನಿರಾಕರಿಸುತ್ತಿವೆ. ಇದರಿಂದ ತಿಂಗಳುಗಟ್ಟಲೇ ಉದ್ಯಮಿಗಳು ಗ್ರಾಮ ಪಂಚಾಯಿತಿ ಹಾಗೂ ಕೆಐಎಡಿಬಿ ಕಚೇರಿಗೆ ಅಲೆಯುವಂತಾಗಿದೆ.

ಅಲ್ಲದೇ 2020ರಲ್ಲಿ ಹಂಚಿಕೆ ಮಾಡಿದ ನಿವೇಶನಕ್ಕೆ ಒಟ್ಟು ಬೆಲೆಯ ಶೇ.10ರಿಂದ 30ರಷ್ಟು ಆರಂಭಿಸಿ ಠೇವಣಿಯನ್ನು ಸಂಗ್ರಹಿಸಿದೆ. ಆದರೆ ಹಣ ಪಾವತಿಸಿ ವರ್ಷಗಳೇ ಕಳೆದರೂ ಬಹುತೇಕ ಹಂಚಿಕೆದಾರರಿಗೆ ಇನ್ನೂ ಅಂತಿಮ ಹಂಚಿಕೆ ಪತ್ರ ನೀಡಿಲ್ಲ.

ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಲು ಬಂಡವಾಳಗಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರ ರಾಜ್ಯ, ವಿದೇಶದಲ್ಲಿ ಪ್ರವಾಸ ಮಾಡುತ್ತಾರೆ. ಆದರೆ ಸ್ವ ಕ್ಷೇತ್ರದಲ್ಲಿ ಕೈಗಾರಿಕೋದ್ಯಮಿಗಳು ಉದ್ಯಮ ಆರಂಭಿಸಲು ಮುಂದಾದರೂ ಸಾಕಷ್ಟು ಅಡೆತಡೆಗಳನ್ನು ಎದುರಿಸುವಂತಾಗಿದೆ.

ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ಅರ್ಹ ರೈತರಿಗೆ ಪರಿಹಾರ ದೊರೆತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಶೀಘ್ರ ಕೈಗಾರಿಕೆ ಆರಂಭಕ್ಕೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಎಂ.ಬಿ.ಪಾಟೀಲ್

ಸಚಿವ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಉದ್ಯಮಿಗಳು ಲಕ್ಷಾಂತರ ರೂ.ಪಾವತಿಸಿ ನಿವೇಶನ ಖರೀದಿಸಿದರೂ ಇನ್ನೂ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಸರ್ಕಾರ, ಪೊಲೀಸರು ಸೂಕ್ತ ರಕ್ಷಣೆಯನ್ನೂ ನೀಡುತ್ತಿಲ್ಲ. ಇದರಿಂದ ನಿವೇಶನ ಮಂಜೂರಾಗಿ ಮೂರು ವರ್ಷ ಕಳೆದರೂ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಕೈಗಾರಿಕೆ ಬೆಳೆವಣಿಗೆಯಾದರ ಜಿಲ್ಲೆಯೂ ಪ್ರಗತಿ ಕಾಣುತ್ತದೆ.

ರಾಮಕೃಷ್ಣೇಗೌಡ

ಗೌರವ ಅಧ್ಯಕ್ಷ, ಕಟ್ಕಿ ಕೈಗಾರಿಕಾ ಒಕ್ಕೂಟ

ಇಮ್ಮಾವು ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಕಳೆದುಕೊಂಡ ನಿಜವಾದ ರೈತರಿಗೆ ಈವರೆಗೂ ಪರಿಹಾರ ಪಾವತಿಸಿಲ್ಲ. ರೈತರಿಗೆ ಪರಿಹಾರ ನೀಡುವ ಹೊರತು ಕೈಗಾರಿಕೆಗಳು ನಿರ್ಮಿಸಲು ಬಿಡುವುದಿಲ್ಲ.

ಹೊಸಕೋಟೆ ಬಸವರಾಜು

ಜಿಲ್ಲಾಧ್ಯಕ್ಷ, ರೈತಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net