

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಐಮೆಕ್ಸ್ ಹುಬ್ಬಳ್ಳಿ 2025 ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಉದ್ಯಮಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಲ್ಲಿಯ ಹೊಸ್ ಕೋರ್ಟ್ ಹಿಂಭಾಗದ ಕಲ್ಲೂರ ಲೇಔಟ್ ನಲ್ಲಿ ಮೇ 16ರಿಂದ ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗಿರೀಶ ನಲವಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಪಾದನಾ ವಲಯದ ಅಭಿವೃದ್ಧಿ ವಹಿವಾಟು ಹೆಚ್ಚಳ ಹಾಗೂ ಉದ್ಯಮಗಳ ಮಧ್ಯೆ ಸಂಪರ್ಕ ವೃದ್ಧಿಸಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಹೊಸ ಯಂತ್ರಗಳು, ಇಂಡಸ್ಟ್ರೀಯಲ್ ವಾಲ್ವ, ಪಂಪ್ಸ್, ಮೋಟಾರ್ಸ್, ಆಟೋಮೇಶನ್ ಟೆಕ್ನಾಲಜಿ ಹಾಗೂ ನಿರ್ವಹಣೆಯಲ್ಲಿನ ಆಧುನಿಕ ತಂತ್ರಜ್ಞಾನ ಇತ್ಯಾದಿಗಳನ್ನು ಪ್ರದರ್ಶನ ಮಾಡಲಾಗುತ್ತದೆ ಎಂದರು.
ಕಬ್ಬಿಣ ಮತ್ತು ಉಕ್ಕು, ಇಂಧನ, ಗ್ಯಾಸ್, ಫಾರ್ಮಾಸಿಟಿಕಲ್ಸ್, ಆಹಾರ ಸಂಸ್ಕರಣೆ ಮುಂತಾದ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡವರು ಇದರಲ್ಲಿ ಭಾಗಿಯಾಗಲಿದ್ದಾರೆ. ನ್ಯಾಷನಲ್ ವೆಂಡರ್ ಡೆವಲಪಮೆಂಟ್ ಪ್ರೋಗ್ರಾಂ ಅನ್ನು ಪ್ರದರ್ಶನ ಒಳಗೊಂಡಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಬೃಹತ್ ಕಂಪನಿಗಳು ಆಗಮಿಸಲಿವೆ. ವಸ್ತು ಪ್ರದರ್ಶನಕ್ಕಾಗಿ 272 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಇವೆಂಟ್ ಚೇರ್ಮನ್ ರಮೇಶ ಪಾಟೀಲ ಮಾತನಾಡಿ, ಎಂಟು ವರ್ಷದ ನಂತರ ಹುಬ್ಬಳ್ಳಿಯಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ನಡೆಯುತ್ತಿದೆ. ಈ ಬಾರಿ 16 ಜನ ಸಾಧಕರಿಗೆ ಉದ್ಯಮಿ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಉದ್ಯಮ ಹಾಗೂ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಲವು ವಿಚಾರಗೋಷ್ಠಿಗಳು ನಡೆಯಲಿವೆ. ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಸರ್ಕಾರಗಳು ಗಮನ ಹರಿಸಬೇಕು ಎಂದರು.
ಐಮೆಕ್ಸ್ ಮೇಳದ ಅಂಗವಾಗಿ ಮೇ 3ರಂದು ಸಂಜೆ 5.30ಕ್ಕೆ ಇಲ್ಲಿಯ ದೇಶಪಾಂಡೆನಗರದ ಕರ್ನಾಟಕ ಜಿಮಖಾನಾ ಕ್ಲಬ್ ನಲ್ಲಿ ಮಾಹಿತಿ ನೀಡುವ ಕಾರ್ಯಕ್ರಮ (ಕರ್ಟನ್ ರೇಸರ್ ಇವೆಂಟ್) ಏರ್ಪಡಿಸಲಾಗಿದೆ. ವಿಭವ ಗ್ರುಪ್ ಆಫ್ ಇಂಡಸ್ಟ್ರೀಸ್ ಎಂಡಿ ಎಚ್.ಎನ್. ನಂದಕುಮಾರ, ಕೆಎಲ್ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಪಾಲ್ಗೊಳ್ಳುವರು.
ಸಂಘದ ಮನೋಹರ ಕೊಟ್ಟೂರಶೆಟ್ಟರ್, ಶಂಕರ ಹಿರೇಮಠ, ಜೆ.ಸಿ. ಮಠದ, ಅಶೋಕ ಕುನ್ನೂರ, ಗೋಷ್ಠಿಯಲ್ಲಿದ್ದರು.