ಐಮೆಕ್ಸ್ ಹುಬ್ಬಳ್ಳಿ ಫಲಕ ಅನಾವರಣ

nEW imex nEW
Published on

ಹುಬ್ಬಳ್ಳಿ : ಇಲ್ಲಿನ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನಗರದ ಕಲ್ಲೂರು ಬಡಾವಣೆಯಲ್ಲಿ ಮೇ 16ರಿಂದ 19ರವರೆಗೆ ನಡೆಯಲಿರುವ ಐಮೆಕ್ಸ್ ಹುಬ್ಬಳ್ಳಿ-2025 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಉದ್ಯಮಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಮಾಹಿತಿ ಫಲಕ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಕ್ಲಬ್​ನಲ್ಲಿ ಶನಿವಾರ ನೆರವೇರಿತು.

ಅತಿಥಿಯಾಗಿದ್ದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ಅಶೋಕ ಶೆಟ್ಟರ ಮಾತನಾಡಿ, ಮುಂದಿನ ಪೀಳಿಗೆಯ ಉದ್ಯಮಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಇಂದಿನ ಕೈಗಾರಿಕೋದ್ಯಮಿಗಳ ಮೇಲೆ ಇದೆ. ಉದ್ಯಮಿಗಳು ದೊಡ್ಡ ಕನಸು ಕಾಣುವಂತಾಗಬೇಕು. ಸಣ್ಣ, ಮಧ್ಯಮ, ಬೃಹತ್ ಉದ್ಯಮಿಗಳು ತಮ್ಮ ಉತ್ಪಾದನೆಗಳನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸದೇ, ಜಾಗತಿಕ ಮಟ್ಟಕ್ಕೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಸ್ಟಾರ್ಟ್​ಅಪ್ ಉದ್ಯಮ ಪ್ರಾರಂಭಿಸುವ ಯುವ ಉದ್ಯಮಿಗಳು ತಮ್ಮ ಕಂಪನಿಯನ್ನು ಬೃಹತ್ ಉದ್ಯಮವನ್ನಾಗಿ ಬೆಳೆಸಲು ಪ್ರಯತ್ನಿಸಬೇಕು. ಅವರಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಹೇಳಿದರು.

ವಿಭವ ಇಂಡಸ್ಟ್ರೀಸ್ ಸಿಇಒ ನಂದಕುಮಾರ ಎಚ್.ಎನ್. ಮಾತನಾಡಿ, ಹುಬ್ಬಳ್ಳಿ ಭಾಗದಲ್ಲಿ ಕೈಗಾರಿಕೆ ಚಟುವಟಿಕೆಗಳು 90ರ ದಶಕದ ನಂತರ ವೇಗ ಪಡೆದುಕೊಂಡವು. ಅದಕ್ಕೂ ಮೊದಲು ಶಿಕ್ಷಣ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇತ್ತು. ಕೆಎಲ್​ಇ ಸಂಸ್ಥೆ ಈ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಅದರೊಂದಿಗೆ ನೈಋತ್ಯ ರೈಲ್ವೆ, ಹೈ ಕೋರ್ಟ್, ಐಐಟಿ ಸೇರಿದಂತೆ ಹಲವಾರು ಸೌಲಭ್ಯಗಳು ಈ ಭಾಗದಲ್ಲಿ ಸ್ಥಾಪನೆಗೊಂಡವು. ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೆಗಳು ಮತ್ತಷ್ಟು ಸ್ಥಾಪನೆಗೊಂಡವು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಉತ್ತರ ಕರ್ನಾಟಕದ ಕೈಗಾರಿಕೆಗಳು ಹೇಗೆ ನಡೆಯುತ್ತವೆ, ಅಗತ್ಯ ಇರುವ ಸೌಲಭ್ಯಗಳು ಸೇರಿದಂತೆ ಇನ್ನಿತರ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಐಮೆಕ್ಸ್ ಹುಬ್ಬಳ್ಳಿ-2025 ಕಾರ್ಯಕ್ರಮದ ಚೇರ್ಮನ್ ರಮೇಶ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಬೃಹತ್ ಮೇಳ ಇದಾಗಿದೆ. ಕೃಷಿ, ರಕ್ಷಣೆ, ಸ್ಟಾರ್ಟ್​ಅಪ್ ಸೇರಿದಂತೆ ವಿವಿಧ ಕ್ಷೇತ್ರಗಳ ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.

ಉದ್ಯಮಿ ರತ್ನ ಪ್ರಶಸ್ತಿ ಕುರಿತು ಮಾಹಿತಿ ನೀಡಿದ ಸಂಘದ ನಿಕಟ ಪೂರ್ವ ಅಧ್ಯಕ್ಷ ಜೆ.ಸಿ. ಮಠದ, ಮೇ 16 ರಿಂದ 19ರವರೆಗೆ ನಡೆಯಲಿರುವ ಐಮೆಕ್ಸ್ ಹುಬ್ಬಳ್ಳಿ-2025ರ ಕಾರ್ಯಕ್ರಮದಲ್ಲಿ ಮೇ 17ರಂದು ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 16 ಉದ್ಯಮಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆ, ಸಂಶೋಧನೆ ಸೇರಿದಂತೆ 8 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗಾಗಿ ಮೇ 7ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.

ಧಾರವಾಡ ಡಿಐಸಿ ಜಂಟಿ ನಿರ್ದೇಶಕ ಶಿವಪುತ್ರಪ್ಪ ಎಚ್., ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ, ಮಹೇಂದ್ರ ವಿಕಮ್ಸಿ, ಬಿಮಲ ಮೆಹತಾ, ನೀಪಾ ಮೆಹತಾ, ಎಂ.ಎಸ್. ಬಿಡಸಾರಿಯಾ, ಶಂಕರ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net