

ಐಮಂಗಲ: ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಜಲಾಶಯಕ್ಕೆ ಮೀಸಲಿಟ್ಟಿದ್ದ 5 ಟಿಎಂಸಿ ಅಡಿ ನೀರಲ್ಲಿ ಮೂರು ಟಿಎಂಸಿ ಅಡಿ ಕಡಿತ ಮಾಡಿರುವ ಸರ್ಕಾರದ ಕ್ರಮಕ್ಕೆ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿಯ ಮಲ್ಲಪ್ಪನಹಳ್ಳಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಡಸಲ ಕೆಂಚಾಂಬ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದರು.
ಡಿ.ಸುಧಾಕರ್ ಸಚಿವರಾಗಿದ್ದಾಗ ರೈತರು ನೀರಿಗಾಗಿ 543 ದಿನಗಳ ಕಾಲ ಹೋರಾಟ ನಡೆಸಿದ್ದರು. ಇದಕ್ಕೆ ಮಣಿದ ಆಗಿನ ಕಾಂಗ್ರೆಸ್ ಸರ್ಕಾರ 5 ಜನ ಕ್ಯಾಬಿನೆಟ್ ದರ್ಜೆ ಸಚಿವರನ್ನು ಹಿರಿಯೂರಿಗೆ ಕಳುಹಿಸಿ ಭದ್ರಾ ಯೋಜನೆ ಜಾರಿ ಜತೆಗೆ 5 ಟಿಎಂಸಿ ಅಡಿ ನೀರು ಮೀಸಲಿಟ್ಟಿತ್ತು ಎಂದರು.
ಈಗ ನಿಗದಿಪಡಿಸಿರುವ 2 ಟಿಎಂಸಿ ಅಡಿ ನೀರು ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಡಿಆರ್‌ಡಿಒ ಯೋಜನೆಗಳಿಗೆ ಸಾಕಾಗುತ್ತದೆ. ಇದರಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರೆ. 5 ಟಿಎಂಸಿ ಅಡಿ ನೀರು ಮರಳಿ ಪಡೆಯಲು ಸುಧಾಕರ್ ಹೋರಾಟಕ್ಕೆ ಇಳಿಯಬೇಕು ಎಂದು ಸಲಹೆ ನೀಡಿದರು.
ಶ್ರೀ ಸಣ್ಣ ವೀರಪ್ಪಯ್ಯ ಸ್ವಾಮೀಜಿ ನೇತೃತ್ವದಲ್ಲಿ ವೇಣುಗೋಪಾಲಶರ್ಮ ಹಾಗೂ ತಂಡದವರು ಕಳಸ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನ ನೆರವೇರಿಸಿದರು.
ಮಾಜಿ ಸಚಿವ ಡಿ.ಸುಧಾಕರ್ ಮಾತನಾಡಿ, ದೇವರು, ಧರ್ಮದ ಮೇಲಿನ ನಂಬಿಕೆ ಜನತೆ ಕಳೆದುಕೊಳ್ಳಬಾರದು. ದೈವ ಕೃಪೆಯಿಂದಲೇ ಉತ್ತಮ ಮಳೆಯಾಗಿ ಕೆರೆ ಕಟ್ಟೆ, ಚೆಕ್ ಡ್ಯಾಂ ತುಂಬಿವೆ. ಗ್ರಾಮಸ್ಥರೆಲ್ಲ ಒಂದಾಗಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿರುವುದು ಸಂತೋಷದ ವಿಚಾರ. ಇಂತಹ ಧಾರ್ಮಿಕ ಸಮಾರಂಭಗಳು ನಿರಂತರ ನಡೆಯಬೇಕು ಎಂದರು.
ಜಿಪಂ ಸದಸ್ಯೆ ಶಶಿಕಲಾ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎನ್.ಮಹಾಲಿಂಗಯ್ಯ, ಎಂ.ಆರ್.ರುದ್ರಯ್ಯ, ಖಾದಿ ರಮೇಶ್, ಎಂ.ಡಿ.ಸಣ್ಣಪ್ಪ, ತಿಪ್ಪೀರಣ್ಣ, ಕೆ.ತಿಪ್ಪೇಸ್ವಾಮಿ, ಹೊಸಳ್ಳಿ ಹನುಮಂತಪ್ಪ, ಮಂಡಿ ಗಿರಿಯಪ್ಪ, ಎಂ.ಜಿ.ಕುಮಾರ್, ಹೇಮಂತ್ ಬಾಬು, ಕೆ.ಹೇಮಣ್ಣ ಇತರರಿದ್ದರು.