

ಐಮಂಗಲ: ಪೊಲೀಸ್ ಠಾಣೆ ಎಂದರೆ ಅಲ್ಲಿ ಸಾದ ದೂರು ದಾಖಲು, ವಿಚಾರಣೆ, ತನಿಖೆ, ವಾಕಿಟಾಕಿ ಶಬ್ದ, ಇನ್ನೂ ಕೆಲವೊಮ್ಮೆ ಲಾಠಿ ಸದ್ದು ಠಾಣೆಯಲ್ಲಿ ಸಾಮಾನ್ಯ.
ಆದರೆ, ಐಮಂಗಲ ಪೊಲೀಸ್ ಠಾಣೆಯಲ್ಲಿ ಮಾತ್ರ ಮಂಗಳವಾರ ರಾತ್ರಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಅಲ್ಲಿ ಭಾಂದವ್ಯ ವಿಜೃಂಭಿಸುತ್ತಿತ್ತು.
ಸದಾ ಕನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಮಗ್ನರಾಗಿರುತ್ತಿದ್ದ ಠಾಣೆಯಲ್ಲಿ ಲಾಠಿ, ವಾಕಿಟಾಕಿ ಸದ್ದಿಗೆ ಕೆಲಕಾಲ ವಿರಾಮ ನೀಡಲಾಗಿತ್ತು.
ಗ್ರಾಮದ ಆರಕ್ಷಕ ಠಾಣೆಯಲ್ಲೇ ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಶಾಲಾಕ್ಷಿ ಪಾಟೀಲ್ ಅವರ ಸೀಮಂತ ಕಾರ್ಯವನ್ನು ಸಹೋದ್ಯೋಗಿಗಳೆಲ್ಲರೂ ಸೇರಿ ಠಾಣೆಯಲ್ಲಿ ಏರ್ಪಡಿಸಿದ್ದರು.
ಮಹಿಳಾ ಸಿಬ್ಬಂದಿ, ಶಾಸ್ತ್ರೋಕ್ತವಾಗಿ ಅರಿಸಿಣ, ಕುಂಕುಮ, ಹೂವು, ಬಳೆತೊಡಿಸಿ ಸೀಮಂತ ಕಾರ್ಯ ನೆರವೇರಿಸಿ ಆರೋಗ್ಯವಂತ ಮಗು ಜನಿಸಲೆಂದು ಶುಭ ಹಾರೈಸಿದರು.
ತವರು ಮನೆಯಲ್ಲಿ ಸಲ್ಲುವ ಗೌರವ ಪ್ರೀತಿ ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ದೊರೆತಿದ್ದರಿಂದ ಭಾವುಕರಾಗಿದ್ದ ವಿಶಾಲಾಕ್ಷಿ, ಸಹದ್ಯೋಗಿಗಳ ಪ್ರೀತಿ, ಆಶೀರ್ವಾದಿಂದ ಕೆಲಕಾಲ ಭಾವುಕರಾಗಿದ್ದರು. ಎಲ್ಲರಿಗೂ ಕೈಮುಗಿದು ನಿಮ್ಮ ಪ್ರೀತಿಗೆ ನಾನು ಚಿರ ಋಣಿ ಎಂದು ಕೃತಜ್ಞತೆ ಸಲ್ಲಿಸುತ್ತಿದ್ದ ದೃಶ್ಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಪಿಎಸ್‌ಐ ಎ.ಮಂಜುನಾಥ್, ಎಎಸ್‌ಐ ಮಲ್ಲಿಕಾರ್ಜುನಯ್ಯ, ಶ್ರೀಶೈಲಪ್ಪ, ಸಿಬ್ಬಂದಿಗಳಾದ ಜೈರಾಮ್, ರಾಜಣ್ಣ, ವಿಷ್ಣು, ವೀರೇಶ್, ಖಾಸಿಂ ಸಾಬ್, ಮಂಜುನಾಥ್, ಯಶೋದಾ, ಚೇತನಾ, ಸಿಬ್ಬಂದಿ ಕುಟುಂಬ ಸದಸ್ಯರು, ಗ್ರಾಮಸ್ಥರಾದ ಟಿ.ಎಲ್.ಬಸವರಾಜಪ್ಪ, ಸಿ.ರಾಧಾಕೃಷ್ಣ, ಪ್ರೀತಮ್, ಜಯಣ್ಣ, ಸಿದ್ದೇಶ, ನಾಗರಾಜ ಇತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.