

ಮುಂಡಗೋಡ: ತಾಲೂಕಿನ ಅತ್ತಿವೇರಿ ಗ್ರಾಮಕ್ಕೆ ಬಸ್ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದ ಶಿವಾಜಿ ವೃತ್ತದ ಬಳಿ ಸೋಮವಾರ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿ ಡಿಪೋ ಮ್ಯಾನೇಜರ್ಗೆ ಮನವಿ ಸಲ್ಲಿಸಿದರು.
ಹುನಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿವೇರಿ ಹಾಗೂ ಗೌಳಿದಡ್ಡಿ ಗ್ರಾಮಕ್ಕೆ ಇದುವರೆಗೂ ಬಸ್ ವ್ಯವಸ್ಥೆ ಇರುವುದಿಲ್ಲ 2-3 ಕಿಮೀ ದೂರದಲ್ಲಿರುವ ಹುನಗುಂದ ಗ್ರಾಮಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತಿ ಮುಂಡಗೋಡಕ್ಕೆ ಹೋಗಬೇಕು ಇದೀಗ ವರ್ಷದಿಂದ ವರ್ಷಕ್ಕೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಮಕ್ಕಳು ಬೆಳಗ್ಗೆ ಹಾಗೂ ಸಂಜೆ ಹುನಗುಂದ ಗ್ರಾಮದ ವರೆಗೆ ನಡೆದುಕೊಂಡು ಹೋಗಿ ಬರುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ನಮ್ಮ ಗ್ರಾಮಕ್ಕೆ ಬಸ್ ಬಿಡಬೇಕು ಎಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಡಿಪೋ ಮ್ಯಾನೇಜರ್ ಹಾಗೂ ನಿಲ್ದಾಣಾಧಿಕಾರಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಒಂದು ವಾರದೊಳಗೆ ಬಸ್ ಓಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಬಸವರಾಜ ಸಂಗಮೇಶ್ವರ, ಬಸವರಾಜ ಹರಿಜನ ಗ್ರಾಮದ ಮುಖಂಡರಿದ್ದರು.