

ಮೈಸೂರು: ‘ಶ್ರೀರಾಮ ಜಯರಾಮ, ಜಯ ಜಯ ರಾಮ’ ಎನ್ನುವ ತಾರಕ ಮಂತ್ರದ ಅಕ್ಷರದಲ್ಲಿಯೇ ಪಾಂಡವಪುರ ತಾಲೂಕು ಪಟ್ಟಸೋಮನಹಳ್ಳಿ ಶಿವಶೈಲ ದೇವಸ್ಥಾನದ ಅರ್ಚಕ ವಿಜಯಕುಮಾರ್ ಅವರು ಶ್ರೀರಾಮನ ಚಿತ್ರ ರಚಿಸಿದ್ದಾರೆ. ಅಕ್ಷರದಲ್ಲಿ ಚಿತ್ರ ರಚಿಸಲು ಮೂರು ದಿನಗಳನ್ನು ತೆಗೆದುಕೊಂಡಿದ್ದು, ಎ4 ಸೈಜಿನ ಒಂದು ಹಾಳೆಯಲ್ಲಿ ಚಿತ್ರ ಬಿಡಿಸಿದ್ದಾರೆ.
ಶ್ರೀರಾಮ ಮಾತ್ರವಲ್ಲದೇ ಭಗವದ್ಗೀತೆಯ 18 ಅಧ್ಯಯಗಳನ್ನು ಕನ್ನಡದಲ್ಲಿ ಹಾಳೆಯ ಎರಡು ಬದಿಯಲಿ ಬರುವಂತೆ ಬರೆದಿದ್ದಾರೆ. ಇದಕ್ಕಾಗಿ ಅವರು 3 ತಿಂಗಳ ಸಮಯಾವಕಾಶ ತೆಗೆದುಕೊಂಡಿದ್ದಾರೆ. ತಮ್ಮ 72ರ ಇಳಿ ವಯಸ್ಸಿನಲ್ಲಿಯೂ ಅಕ್ಕಿಕಾಳಿನಲ್ಲಿ ಹೆಸರು, ತಾರಕ ಮಂತ್ರ, ಬೆಂಕಿ ಕಟ್ಟಿಯಲ್ಲಿ ಅಕ್ಷರ ಬರೆದು ಅದರಲ್ಲಿ ವಿವಿಧ ದೇವರ ಚಿತ್ರ ನಿರ್ಮಿಸಿದ್ದಾರೆ.
ನಟರಾದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಸೇರಿದಂತೆ ಅನೇಕ ಗಣ್ಯರ ಚಿತ್ರಗಳು, ಜೀವನ ಘಟನೆಗಳನ್ನು ಆಧರಿಸಿ ಅಕ್ಷರದಲ್ಲಿ ಮೂಡಿಸಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವರಾದ ವಿಜಯಕುಮಾರ ಅವರು ಬಿಕಾಂ ಅರ್ಧಕ್ಕೆ ನಿಲ್ಲಿಸಿ ಅರ್ಚಕ ವೃತ್ತಿ ಕೈಗೊಂಡಿದ್ದಾರೆ.