

ಮಂಗಳೂರು : ಬ್ಯಾಡ್ಮಿಂಟನ್ ಆಟಗಾರರು ಕ್ರೀಡಾ ಸ್ಪೂರ್ತಿಯನ್ನು ಪ್ರದರ್ಶಿಸಿ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ.ಚಾನ್ಸಲರ್ ಡಾ.ಹೆಚ್.ಎಸ್. ಬಳ್ಳಾಲ್ ಸಲಹೆ ನೀಡಿದ್ದಾರೆ.
ನಗರದ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ ಎರಡು ದಿನಗಳ ಕಾಲ ಭಾರತೀಯ ವೈದ್ಯಕೀಯ ಸಂಸ್ಥೆಯ ಸದಸ್ಯರಿಗಾಗಿ ಏರ್ಪಡಿಸಿದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧಾಕೂಟವನ್ನು ಉದ್ಘಾಟಿಸಿ, ಮಾತನಾಡಿದರು.
ಮುಂದಿನ ವರ್ಷ ಈ ಪ್ರತಿಷ್ಠಿತ ಪಂದ್ಯಾಟವನ್ನು ಮಣಿಪಾಲದಲ್ಲಿ ಆಯೋಜಿಸಲು ಐ.ಎಂ.ಎ. ಆಡಳಿತ ಮಂಡಳಿಗೆ ಆಹ್ವಾನ ನೀಡಿ, ಕ್ರೀಡಾಪಟುಗಳಿಗೆ ಯಶಸ್ಸು ಕೋರಿದರು.
ಫಾ.ಮುಲ್ಲರ್ಸ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೋ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಈ ಪಂದ್ಯಕೂಟವು ನಮ್ಮ ಸಂಸ್ಥೆಯ ಕ್ರೀಡಾ ಸಂಕೀರ್ಣದಲ್ಲಿ ಜರಗುವ ಬಗ್ಗೆ ಸಂತಸ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಒದಗಿಸಿದ ಸೌಲಭ್ಯಗಳ ಬಗ್ಗೆ ಹರುಷ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಕ್ರೀಡಾಕೂಟವನ್ನು ಮಂಗಳೂರು ಶಾಖೆಯು ಎರಡನೇ ಬಾರಿಗೆ ಆಯೋಜಿಸಿದ್ದು, ಈ ಸ್ಫರ್ಧಾಕೂಟದಲ್ಲಿ 150 ತಂಡಗಳು ಸ್ಫರ್ಧಿಸಲಿವೆ ಎಂದರು. ಐ.ಎಂ.ಎ. ರಾಜ್ಯಾಧ್ಯಕ್ಷ ಡಾ.ಶಿವಕುಮಾರ್ ಲಕ್ಕೊಲ್ ಶುಭ ಹಾರೈಸಿದರು.
ಡಾ. ಸೋಮಣ್ಣ ಸ್ಮಾರಕ ಬ್ಯಾಡ್ಮಿಂಟನ್ ಕೂಟದ ರಾಜ್ಯಾಧ್ಯಕ್ಷ ಡಾ. ತ್ಯಾಗರಾಜ್, ಐ.ಎಂ.ಎ. ಕ್ರೀಡಾ ಸಮಿತಿಯ ಅಧ್ಯಕ್ಷ ಡಾ.ದಿನೇಶ್ ಹೆಗಡೆ, ಐ.ಎಂ.ಎ. ಕಾರ್ಯದರ್ಶಿ ಅರ್ಚಿತ್ ಬೋಳಾರ್ ಉಪಸ್ಥಿತರಿದ್ದರು.
ಸಂಘಟನಾ ಅಧ್ಯಕ್ಷ ಡಾ.ಸತೀಶ್‌ಚಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಂದಕಿಶೋರ್ ವಂದಿಸಿದರು. ಡಾ. ಅರ್ಚನ ಭಟ್, ಡಾ.ಕ್ರಿಸ್ತಿನಾ ಗೋವಿಯಸ್ ಕಾರ್ಯಕ್ರಮ ನಿರೂಪಿಸಿದರು.