ಐಎಂಎ ರಾಷ್ಟ್ರೀಯ ವೈದ್ಯರ ದಿನಾಚರಣೆ

ಐಎಂಎ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಸಾಧಕ ವೈದ್ಯರಾದ ಡಾ.ಸುರೇಶ್ ವೈ.ವಿ., ಡಾ.ಕೆ.ಪಿ. ಶೆಣೈ, ಡಾ.ಮೀರಾ ರಾವ್ ಎ. ಅವರನ್ನು ಅಭಿನಂದಿಸಲಾಯಿತು.
ಐಎಂಎ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಸಾಧಕ ವೈದ್ಯರಾದ ಡಾ.ಸುರೇಶ್ ವೈ.ವಿ., ಡಾ.ಕೆ.ಪಿ. ಶೆಣೈ, ಡಾ.ಮೀರಾ ರಾವ್ ಎ. ಅವರನ್ನು ಅಭಿನಂದಿಸಲಾಯಿತು.
Published on
ಮಂಗಳೂರು : ಆರೋಗ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಹಗಲು ರಾತ್ರಿ ಲೆಕ್ಕಿಸದೆ ನಿಸ್ವಾರ್ಥ ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ನಿರಂತರ ಶ್ರಮಿಸುವ ವೈದ್ಯರ ವೃತ್ತಿ ಮತ್ತು ತ್ಯಾಗಮಯ ಜೀವನ ಪ್ರಶಂಸನೀಯ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರಶಂಸಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಡಾ. ಎ. ವಿ. ರಾವ್ ಸಭಾಂಗಣದಲ್ಲಿ ಜರಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಶಾಂತಾರಾಮ ಶೆಟ್ಟಿ ಅವರು, ವೈದ್ಯರು ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ರೋಗಿಗಳು ವೈದ್ಯರನ್ನು ದೇವರಿಗೆ ಸಮಾನ ಎಂದು ಗುರುತಿಸಿದ್ದಾರೆ. ಹಿರಿಯ ವೈದ್ಯರು ಯುವ ವೈದ್ಯರಿಗೆ ತಮ್ಮ ಜ್ಞಾನವನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿ, ವೈದ್ಯರ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿದರು. ಮಾಜಿ ಅಧ್ಯಕ್ಷ ಡಾ. ಕೆ. ಆರ್. ಕಾಮತ್ ಅವರು ಪಶ್ಚಿಮ ಬಂಗಾಲ ಕೊಲ್ಕತ್ತಾ ನಗರದ ಖ್ಯಾತ ವೈದ್ಯ, ಮಾಜಿ ಮುಖ್ಯಮಂತ್ರಿ ಭಾರತರತ್ನ ಪ್ರಶಸ್ತಿ ಪುರಸ್ಕೃತ ದಿ.ಬಿ.ಸಿ.ರಾಯ್ ಅವರ ಜೀವಮಾನ ಸಾಧನೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರದ ವೈದ್ಯರುಗಳಾದ ಡಾ.ಸುರೇಶ್ ವೈ.ವಿ. (ಅರಿವಳಿಕೆ ಶಾಸ್ತ್ರ ತಜ್ಞರು), ಡಾ.ಕೆ.ಪಿ. ಶೆಣೈ (ಕುಟುಂಬ ವೈದ್ಯರು), ಡಾ.ಮೀರಾ ರಾವ್ ಎ. (ಮಕ್ಕಳ ಶಾಸ್ತ್ರ ತಜ್ಞರು) ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸುಧೀರ್ಘ ಸೇವೆ ಪರಿಗಣಿಸಿ ಅಭಿನಂದಿಸಲಾಯಿತು. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆ ಪ್ರಾಯೋಜಿಸಿದ ವೈದ್ಯರ ದಿನಾಚರಣೆಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಚ್ಚಿದಾನಂದ ರೈ ಅವರನ್ನು ಸನ್ಮಾನಿಸಲಾಯಿತು.
ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್, ಮಾಜಿ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಭಾರತೀಯ ವೈದ್ಯಕೀಯ ಸಂಘ ಪ್ರತಿಷ್ಠಾನದ ಅಧ್ಯಕ್ಷ ಡಾ.ದಿವಾಕರ ರಾವ್, ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ.ಪ್ರೇಮಾ ಕುಟಿನ್ಹಾ ಉಪಸ್ಥಿತರಿದ್ದರು.
ಅಕ್ಷತಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಡಾ.ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net