

ಬೆಂಗಳೂರು:ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ವಂಚನೆಗೊಳಗಾದ ಹೂಡಿಕೆದಾರರಿಂದ ಕ್ಲೇಮ್ ಅರ್ಜಿ ಸ್ವೀಕಾರ ಪ್ರಕ್ರೀಯೆಯು ನ.25ರಿಂದ ಪ್ರಾರಂಭವಾಗಲಿದ್ದು, ಡಿ.24ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷ ಗುಪ್ತ ತಿಳಿಸಿದ್ದಾರೆ.
ವಾರ್ತಾಸೌಧದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಹೂಡಿಕೆದಾರರಿಂದ ಕ್ಲೇಮು ಅರ್ಜಿ ಸ್ವೀಕೃತಿಯು ನ.25 ರಿಂದ ಪ್ರಾರಂಭವಾಗಲಿದ್ದು, ಒಂದು ತಿಂಗಳಿನಲ್ಲಿ ಅಂದರೆ ಡಿ.24ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಯಾವುದೇ ಕ್ಲೇಮು ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಐಎಂಎ ಠೇವಣಿದಾರರು ಬೆಂಗಳೂರು-1 , ಕರ್ನಾಟಕ-1, ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿರುವ ಆಪರೇಟರ್ ಸಹಾಯದಿಂದ ಅನ್‌ಲೈನ್ ಮುಖಾಂತರ ಕ್ಲೇಮು ಅರ್ಜಿಗಳನ್ನು ಸಲ್ಲಿಸಬಹುದು. ಅಥವಾ ತಮ್ಮದೇ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಕ್ಲೇಮು ಅರ್ಜಿಗಳನ್ನು 2 ಹಂತದಲ್ಲಿ ಸಲ್ಲಿಸಬಹುದು. 1ನೇ ಹಂತದಲ್ಲಿ ಅರ್ಜಿದಾರರು ತಮ್ಮ ವೈಯಕ್ತಿಕವಿವರಗಳಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮುಂತಾದವುಗಳನ್ನು ಸಲ್ಲಿಸಬೇಕು. 2ನೇ ಹಂತದಲ್ಲಿ ಐಎಂಎಗೆ ಸಂಬಂಧಿಸಿದ ಯೋಜನಾವಾರು ಹೂಡಿಕೆ ವಿವರಗಳನ್ನು ಸಲ್ಲಿಸಬೇಕು ಎಂದು ಹರ್ಷಗುಪ್ತ ತಿಳಿಸಿದರು.