ಚೆಸ್ ಪಂದ್ಯಾವಳಿಯಲ್ಲಿ ಶರಣ ರಾವ್ ಚಾಂಪಿಯನ್

chess sharan rao
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಖಿಲ ಭಾರತ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಕರ್ನಾಟಕದ ಶರಣ ರಾವ್ ಚಾಂಪಿಯನ್ ಆಗಿದ್ದಾರೆ.

ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಅವರು 8.5 ಅಂಕಗಳನ್ನು ಗಳಿಸಿ ಚಾಂಪಿಯನ್​ಶಿಪ್ ಟ್ರೋಫಿ ಹಾಗೂ 35 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು. ಭಾನುವಾರ 9ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಶರಣ್, ಅಗ್ರಶ್ರೇಯಾಂಕಿತ ಶ್ಯಾಮ್ ನಿಖಿಲ್ ವಿರುದ್ಧ ನಿರ್ಣಾಯಕ ಗೆಲುವು ದಾಖಲಿಸಿದರು. 8ನೇ ಸುತ್ತಿನ ಬಳಿಕ ಶ್ಯಾಮ್ ನಿಖಿಲ್ 7.5 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದರು.

9ನೇ ಸುತ್ತಿನಲ್ಲಿ ಪ್ರಶಾಂತ ನಾಯ್ಕ ವಿರುದ್ಧ ಗೆಲುವು ಸಾಧಿಸಿದ ಕರ್ನಾಟಕದವರೇ ಆದ ಪ್ರಜ್ವಲ್ ಶೇಟ್ 8 ಅಂಕಗಳೊಂದಿಗೆ ರನ್ನರ್ ಅಪ್ ಟ್ರೋಫಿ ಹಾಗೂ 25 ಸಾವಿರ ರೂ. ನಗದು ಬಹುಮಾನ ಪಡೆದರು. ಮಹಾರಾಷ್ಟ್ರದ ಸೋಹಮ್ ದಾತಾರ್ 9ನೇ ಸುತ್ತಿನಲ್ಲಿ ತಮ್ಮ ರಾಜ್ಯದವರೇ ಆದ ಸಮ್ಮೇದ ಜಯಕುಮಾರ ವಿರುದ್ಧ ಜಯ ಗಳಿಸಿ 8 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಶಾಸಕ ಮಹೇಶ ಟೆಂಗಿನಕಾಯಿ, ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ನಾಸಿರ್ ಬೊರಸಡವಾಲಾ, ಡಾ. ಬಸವರಾಜ ಅನಾಮಿ, ಕರ್ನಾಟಕ ರಾಜ್ಯ ಚದುರಂಗ ಸಂಸ್ಥೆಯ ಕಾರ್ಯದರ್ಶಿ ಅರವಿಂದ ಶಾಸ್ತ್ರಿ ಬಹುಮಾನ ವಿತರಿಸಿದರು. ಒಟ್ಟು 2 ಲಕ್ಷ ರೂ. ನಗದು ಬಹುಮಾನ ಹಾಗೂ 75 ಟ್ರೋಫಿಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net