ಡಬಲ್ ಗೇಮ್ ರಾಜಕಾರಣಿ ನಾನಲ್ಲ ; ಮಾಜಿ ಶಾಸಕ ಸುರೇಶ್‌ಗೌಡಗೆ ಶಾಸಕ ಗೌರಿಶಂಕರ್ ಟಾಂಗ್

14TMK_Gowrishankar
Published on

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಜ್ಯಸಭೆಗೆ ಅವಿರೋಧ ಆಯ್ಕೆ ಮಾಡಿದ್ದು, ಸಂಸತ್‌ನಲ್ಲಿ ರಾಜ್ಯದ ಪರ ದನಿಯಾಗಲಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಅಭಿಪ್ರಾಯಪಟ್ಟರು.

ಬೆಳ್ಳಾವಿಯಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿ, ತುಮಕೂರು ಕ್ಷೇತ್ರದಲ್ಲಿ ದೇವೇಗೌಡರನ್ನು ಸೋಲಿಸಿದ್ದ ಅಪಕೀರ್ತಿ ನಮ್ಮೆಲ್ಲರಿಗೂ ಇತ್ತು, ಆ ಕಳಂಕ ಈಗ ದೂರವಾದಂತಾಗಿದೆ. ದೇಶದ ಮುತ್ಸದ್ಧಿ ರಾಜಕಾರಣಿ ಸಂಸತ್‌ನಲ್ಲಿ ಇರುವುದು ಅನಿವಾರ್ಯವಾಗಿತ್ತು ಎಂದರು.

ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ, ಜಾತಿ ರಾಜಕಾರಣ ಮಾಡುವ ಕಲೆಯೂ ತಿಳಿದಿಲ್ಲ, ನಾನು ನೇರ ನಡೆ ನುಡಿಯ ರಾಜಕಾರಣಿ, ಎಂದೂ ಡಬಲ್ ಗೇಮ್ ಮಾಡಿಲ್ಲ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ 65 ಸಾವಿರ ಆಹಾರ ಕಿಟ್ ವಿತರಿಸಲಾಗಿದ್ದು, ಕೆಸರಮಡು ಮತ್ತು ಬುಗುಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡನೇ ಹಂತದ ವಿತರಣೆ ನಡೆಯುತ್ತಿದೆ, ಬೆಳ್ಳಾವಿಯಲ್ಲಿ 2 ಸಾವಿರ ಕಿಟ್ ವಿತರಣೆಯಾಗಲಿದೆ ಎಂದರು. ಔಷಧ ಕೊಳ್ಳಲಾಗದವರಿಗೆ 5 ಲಕ್ಷ ರೂ.ವೆಚ್ಚದಲ್ಲಿ ಮನೆಗೆ ತಲುಪಿಸಿದ್ದೇನೆ. ನಮಗೆ ಔಷಧ ಬೇಕು ಎಂದು ಯಾರೇ ಬಂದರೂ ವೈದ್ಯರ ಚೀಟಿ ಇದ್ದರೆ ಔಷಧ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಿಂಗೀಪುರ ಮತ್ತು ನರಸೀಪುರ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಂತೆ ಅಭಿವೃದ್ಧಿಪಡಿಸಲಾಗಿದ್ದು, ಸೋರೆಕುಂಟೆ ರಸ್ತೆಯ ಕಾಮಗಾರಿ ಆರಂಭಗೊಂಡಿದೆ. ಗ್ರಾಮಾಂತರಕ್ಕೆ ಪದವಿ ಕಾಲೇಜು ತಂದಿದ್ದೇನೆ, ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದ್ದೇನೆ ಎಂದರು. ಎತ್ತಿನಹೊಳೆ ಯೋಜನೆ ಪೂರ್ಣಗೊಂಡ ಬಳಿಕ ಅಂದು ಯಾವುದೇ ಸರ್ಕಾರವಿರಲಿ ಬೆಳ್ಳಾವಿಯ 6 ಕೆರೆ ತುಂಬಿಸಿದ ನಂತರವೇ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಹಾಲನೂರು ಅನಂತ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net