ನೆಲಮಂಗಲ: ಪ್ರೀತಿಸುತ್ತಿರುವ ಹುಡುಗನ ಜತೆ ಹೋಗುತ್ತಿದ್ದೇನೆ, ಎರಡು ವಾರಗಳ ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ವಾಟ್ಸಾಪ್ ಸಂದೇಶ ಕಳುಹಿಸಿ ಯುವತಿ ನಾಪತ್ತೆಯಾಗಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದ ರವಿಕಿರಣ್ ಎಂಬಾತನೊಂದಿಗೆ ಸ್ನೇಹ ಬೆಳೆಸಿ ನಂತರ ಪ್ರೀತಿಸುತ್ತಿದ್ದರು ಎನ್ನಲಾಗಿದೆ, ಗುರುವಾರ ತಾಯಿಗೆ ವಾಟ್ಸಾಪ್ ಸಂದೇಶ ಕಳುಹಿಸಿ, "ನನ್ನನ್ನು ಹುಡುಕಬೇಡಿ. ನಾನು ಪ್ರೀತಿಸುತ್ತಿರುವ ರವಿಕಿರಣ್ ಜತೆಗೆ ಹೋಗುತ್ತಿದ್ದೇನೆ. ಎರಡು ವಾರಗಳ ನಂತರ ಮನೆಗೆ ವಾಪಸ್ ಬರುತ್ತೇನೆ' ಎಂದು ಸಂದೇಶ ಕಳಿಸಿ ಮೊಬೈಲ್ ಸ್ವಿಚ್ಡ್ಆಫ್ ಮಾಡಿದ್ದಾಳೆ. ಹೀಗಾಗಿ ಯುವತಿಯ ತಾಯಿ ಮಾದನಾಯಕನಹಳ್ಳಿ ಠಾಣೆಗೆ ದೂರು ದಾಖಲಿಸಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಪರಿಶೀಲನೆ, ಮೊಬೈಲ್ ಲೊಕೇಷನ್ ಟ್ರ್ಯಾಕ್ ಸೇರಿ ವಿವಿಧ ಕ್ರಮ ಕೈಗೊಂಡಿದ್ದಾರೆ. ಯುವತಿಯ ಪತ್ತೆಗಾಗಿ ಆರಕ್ಷಕ ನಿರೀಕ್ಷಕ ಮುರುಳೀಧರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.