ಐಲೈಫ್ ನಿಂದ ವೈದ್ಯರ ಸಮ್ಮೇಳನ,  ಶಿವಮೊಗ್ಗದಲ್ಲಿ 20ರಿಂದ ಆಯೋಜನೆ

Published on

ಹುಬ್ಬಳ್ಳಿ: ಇಂಟರ್ ನ್ಯಾಷನಲ್ ಲಿಂಗಾಯತ ಯೂಥ್ ಫೋರಂ (ಐಲೈಫ್) ಶಿವಮೊಗ್ಗ ಘಟಕದ ವತಿಯಿಂದ ಡಾಕ್ಟರ್ ಪ್ರೆನ್ಯೂರ್ (ವೈದ್ಯಕಿಯ ವೃತ್ತಿ ನಿರತರ) ಸಮ್ಮೇಳನವನ್ನು ಶಿವಮೊಗ್ಗದ ಸರ್ಜಿ ಕನ್ವೆನ್ಶನ್ ಹಾಲ್ ನಲ್ಲಿ ಸೆ. 20ರಿಂದ ಎರಡು ದಿನಗಳವರೆಗೆ ಏರ್ಪಡಿಸಲಾಗಿದೆ ಎಂದು ಐಲೈಫ್ ಹುಬ್ಬಳ್ಳಿ ಚಾಪ್ಟರ್ ಅಧ್ಯಕ್ಷ ಗುರು ಅಂಗಡಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 20ರಂದು ಬೆಳಗ್ಗೆ 9.30ಕ್ಕೆ ವೈದ್ಯಕಿಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಮಾವೇಶ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಂಸದರಾದ ಬಿ.ವೈ. ರಾಘವೇಂದ್ರ, ಡಾ. ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನಾಗೇಂದ್ರಸ್ವಾಮಿ ಪ್ರಧಾನ ಭಾಷಣ ಮಾಡುವರು. ಸಮಾವೇಶದಲ್ಲಿ ಕಂಪನಿಗಳ ರಚನೆ ಮತ್ತು ಕಾನೂನು ಪಾಲನೆ, ಆಸ್ಪತ್ರೆಗಳ ವಿಸ್ತರಣೆ, ಆಸ್ತಿ ನಿರ್ವಹಣೆ, ಕೃತಕ ಬುದ್ಧಿಮತ್ತೆ, ವೈದ್ಯಕಿಯ, ಬ್ರಾಂಡಿಂಗ್ ಹಾಗೂ ಮೆಡಿಕೋ ಲೀಗಲ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಐಲೈಫ್ ವಿವಿಧ ಘಟಕಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿ ಭವಿಷ್ಯದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವರು. ಸಾಂಸ್ಕೃತಿಕ ಕಾರ್ಯಕ್ರಮ, ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

2013ರಲ್ಲಿ ಸ್ಥಾಪನೆಯಾದ ಐಲೈಫ್ ಯುವಕರಲ್ಲಿ ನಾಯಕತ್ವ, ಉದ್ಯಮಶೀಲತೆ, ಆರ್ಥಿಕ ಶಕ್ತಿ ಉತ್ತೇಜಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಸಂಘಟನೆಯ ಮೊದಲ ಸಮಾವೇಶದಲ್ಲಿ ಸದಸ್ಯರ ಮಧ್ಯೆ ಪರಸ್ಪರ ವ್ಯಾಪಾರ ವಹಿವಾಟಿನ ಒಪ್ಪಂದಗಳು ಏರ್ಪಟ್ಟು ಸುಮಾರು 34 ಕೋಟಿ ರೂ. ವಹಿವಾಟು ವ್ಯಾಪಾರ ಮಾಡಲಾಗಿದೆ.

ನಂತರದ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚುತ್ತ ಸಾಗಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಸಮಾವೇಶದಲ್ಲಿ ಈ ವಹಿವಾಟನ್ನು 150 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ಗೋಷ್ಠಿಯಲ್ಲಿ ಶರಣು ಪಾಟೀಲ್, ನಾಗರಾಜ್ ಎಂ., ವಿಜಯ ಮಹಾಂತೇಶ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net