

ಬೆಳಗಾವಿ: ಆಟೋಮೊಬೈಲ್ ಕ್ಷೇತ್ರ ಉತ್ತೇಜಿಸುವ ದೃಷ್ಟಿಯಿಂದ ಆಟೋ ನಗರದಲ್ಲಿ (ಕಣಬರ್ಗಿ)ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ಸಮರ್ಪಕ ಕಸ ವಿಲೇವಾರಿಯಾಗದೆ ವಾರಗಟ್ಟಲೆ ಇಲ್ಲಿನ ರಸ್ತೆಯ ಪಕ್ಕದಲ್ಲೆ ಕಸದ ರಾಶಿ ಬೀಳುತ್ತಿದೆ. ಇದರಿಂದ ಇಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸರ್ಕಾರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತದೆ. ಆದರೆ ಆಟೋನಗರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಅಸಡ್ಡೆಯಿಂದ ಅಸ್ವಚ್ಛತೆ ತಾಂಡವಾಡುತ್ತಿದ್ದು, ಇಲ್ಲಿನ ಜನರಿಗೆ ವಾಯು ಮಾಲಿನ್ಯದ ಜತೆಗೆ ಪರಿಸರ ಮಾಲಿನ್ಯದ ಪರಿಣಾಮ ಎದುರಿಸಬೇಕಿದೆ.
7 ದಿನಕ್ಕೊಮ್ಮೆ ತಾಜ್ಯ ವಿಲೇವಾರಿ:
ರಾಮತೀರ್ಥ ನಗರ ಹಾಗೂ ಆಟೋನಗರ ಅವಳಿ ಪ್ರದೇಶಗಳಾಗಿವೆ. ಪಾಲಿಕೆಯಿಂದ ಕಸ ಸಂಗ್ರಹದ ನಿಗದಿತ ಸ್ಥಳಗಳಿಲ್ಲ. ಪಾಲಿಕೆ ಸಿಬ್ಬಂದಿ 7 ದಿನಕೊಮ್ಮೆ ಕಸ ವಿಲೇವಾರಿ ಮಾಡುತ್ತಾರೆ. ಈ ಪ್ರದೇಶದ ಸುತ್ತ ಅಂದಾಜು 10 ಸಾವಿರ ಜನ ಸಂಖ್ಯೆ ಇದೆ. ಹೀಗಾಗಿ ದಿನಕ್ಕೆ ಒಮ್ಮೆಯಾದರೂ ಇಲ್ಲಿಯ ಕಸವಿಲೇವಾರಿ ಆಗಬೇಕು. ಆದರೆ, ಅದು ವಾರಕ್ಕೊಮ್ಮೆ ಆಗುತ್ತಿರುವ ಕಾರಣ ಸುತ್ತಲ ಪ್ರದೇಶಲ್ಲಿ ಅಸ್ವಚ್ಛತೆ ರಾರಾಜಿಸುತ್ತಿದೆ.
ನಾಲಾಗೆ ತಾಜ್ಯ ನೀರು:
ಆಟೋನಗರ ಕೈಗಾರಿಕಾ ಪ್ರದೇಶದಲ್ಲಿ ಇಂಡಸ್ಟ್ರೀಸ ಕೆಮಿಕಲ್, ರಸ ಗೊಬ್ಬರ ಉತ್ಪಾದನೆ, ಆಟೋಮೊಬೈಲ್ ಬಿಡಿ ಭಾಗ ಉತ್ಪಾದನೆ ಕಾರ್ಖಾನೆ ಸೇರಿ ಸುಮಾರು 800ಕ್ಕೂ ಅಧಿಕ ಕೈಗಾರಿಕಾ ಘಟಕಗಳಿವೆ. ಈ ಪ್ರದೇಶದಲ್ಲಿ ಹಾದು ಹೋಗಿರುವ ನಾಲಾದಲ್ಲಿ ಈ ಕೈಗಾರಿಕಾ ಕಾರ್ಖಾನೆಗಳ ರಸಾಯನಿಕಯುಕ್ತ ನೀರು ಸೇರುತ್ತದೆ ಹಾಗೂ ಇಲ್ಲಿನ ತಾಜ್ಯ ವಿಲೇವಾರಿ ಸಮರ್ಪಕವಾಗದ ಹಿನ್ನಲೆ ನಾಲಾದಲ್ಲಿಯು ಸಹ ಕಸವನ್ನು ತಂದು ಸುರಿಯಲಾಗುತ್ತಿದೆ. ಪರಿಣಾಮ ಕೈಗಾರಿಕಾ ಪ್ರದೇಶದ ವಾತಾವರಣ ಸಂಪೂರ್ಣ ಅನಾರೋಗ್ಯಮಯವಾಗುತ್ತಿದೆ.
ಆರೋಗ್ಯ ಕೇಂದ್ರಕ್ಕೆ ಬೇಡಿಕೆ:
ಸುಮಾರು 10 ಸಾವಿರಕ್ಕೂ ಅಧಿಕ ಜನರು ವಾಸಿಸುವ ರಾಮತೀರ್ಥನಗರ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲ. ಇಲ್ಲಿನ ಜನರಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ 7 ಕಿಮೀ ದೂರವಿರುವ ಹೊಸ ವಂಟಮೂರಿ ಕಾಲನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ಅನಿವಾರ್ಯತೆಯಿದೆ. ಹೀಗಾಗಿ ಈ ಪ್ರದೇಶದಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಕಸ ವಿಲೆವಾರಿ ಯಾರ ಹೊಣೆ?:
ಕೈಗಾರಿಕಾ ಪ್ರದೇಶದಲ್ಲಿ ಕಸ ವಿಲೇವಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಜಾರಿಕೊಂಡರೆ, ಕೈಗಾರಿಕಾ ಪ್ರದೇಶದ ಕಸ ವಿಲೇವಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ತೆರಿಗೆ ಕಟ್ಟುವ ಇಲ್ಲಿನ ಜನರಿಗೆ ಕಸ ವಿಲೇವಾರಿ ಯಾರ ಹೊಣೆ ಎಂಬುವುದನ್ನು ಅಧಿಕಾರಿಗಳು ಸ್ಪಷ್ಟ ಪಡೆಸಬೇಕಿದೆ.