

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ನಗರ ಮತ್ತು ಗ್ರಾಮಾಂತರ ಯೋಜನೆ ಜಂಟಿ ನಿರ್ದೇಶಕ ಜಯರಾಜ್ ವಿ.ಕೆ. ಎಂಬುವರ ಕಚೇರಿ, ನಿವಾಸ ಸಹಿತ ನಾಲ್ಕು ಕಡೆ ಎಸಿಬಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಈ ವೇಳೆ 1,78,28,130 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 1.10 ಕೋಟಿ ರೂ. ಅಕ್ರಮ ಸಂಪಾದನೆಯಾಗಿದೆ ಎಂಬ ಮಾಹಿತಿ ಲಭಿಸಿದೆ.
ಕಾಪಿಕಾಡ್ ಹಾಗೂ ಬಿಜೈನಲ್ಲಿರುವ ನಿವಾಸ, ಅವರ ಅಣ್ಣ ಹಾಗೂ ತಂದೆ ವಾಸ ಇರುವ ಪಡೀಲ್‌ನ ಮನೆ, ಕೇರಳದ ಮಾಹೆಯಲ್ಲಿರುವ ಅವರ ಪತ್ನಿಯ ಕ್ವಾರ್ಟ್ರಸ್‌ಗೆ ಏಕಕಾಲದಲ್ಲಿ ದಾಳಿ ನಡೆಯಿತು. ಮಂಗಳೂರಿನಲ್ಲಿ ಎಸಿಬಿ ಎಸ್ಪಿ ಬೋಪಯ್ಯ ನೇತೃತ್ವದಲ್ಲಿ ಡಿವೈಎಸ್‌ಪಿ ಪ್ರಕಾಶ್, ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಮತ್ತು ಗುರುರಾಜ್ ದಿನವಿಡೀ ಕಾರ್ಯಾಚರಣೆ ಕೈಗೊಂಡರು.
ಜಯರಾಜ್ ಐದು ವರ್ಷಗಳಿಂದ ಮನಪಾದಲ್ಲಿ ಇದೇ ಹುದ್ದೆಯಲ್ಲಿದ್ದಾರೆ. 2004ರಿಂದ ಸರ್ಕಾರಿ ಹುದ್ದೆಯಲ್ಲಿದ್ದು, ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಮೌಲ್ಯದ ಆಸ್ತಿ?:: ಜಯರಾಜ್ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಹಾಗೂ ಡಿಪಾಸಿಟ್ 78,93,250 ರೂ, ಮನೆಯಲ್ಲಿ 7.79 ಲಕ್ಷ ರೂ. ನಗದು, ಇನ್ಸೂರೆನ್ಸ್ ಡಿಪಾಸಿಟ್ ಬಾಂಡ್ 10 ಲಕ್ಷ ರೂ, ಪತ್ನಿ ಜಯಶ್ರೀ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಹಾಗೂ ಡಿಪಾಸಿಟ್ 20 ಲಕ್ಷ ರೂ, ಆಕೆಯ ಮನೆಯಲ್ಲಿ 3.50 ಲಕ್ಷ ರೂ. ನಗದು, ದಂಪತಿಯ ವಾಸದ ಮನೆಯಲ್ಲಿ 7.64 ಲಕ್ಷ ರೂ. ಮೌಲ್ಯದ 191 ಗ್ರಾಂ ಚಿನ್ನಾಭರಣ ಹಾಗೂ 1047 ಗ್ರಾಂ ಬೆಳ್ಳಿಯ ಆಭರಣ ಸಹಿತ ಒಟ್ಟು 1,10,28,130 ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
ಮಂಗಳೂರು ತಾಲೂಕು ಅಳಪೆ ಪಡೀಲ್ ಗ್ರಾಮದಲ್ಲಿ 5 ಸೆಂಟ್ಸ್ ಜಾಗದಲ್ಲಿ ಒಂದು ಅಂತಸ್ತಿನ ಮನೆ 2012ರಲ್ಲಿ ಖರೀದಿಸಿದ್ದು, ಇದರ ಮೌಲ್ಯ 17 ಲಕ್ಷ ರೂ, ಬಿಜೈ ಕಾಪಿಕಾಡ್‌ನಲ್ಲಿ 4ನೇ ಅಡ್ಡರಸ್ತೆಯಲ್ಲಿ 36.50 ಲಕ್ಷ ರೂ. ಮೌಲ್ಯದ ಅಪಾರ್ಟ್‌ಮೆಂಟ್, ಸೋಮೇಶ್ವರ ಗ್ರಾಮದ ಕುಂಪಲದಲ್ಲಿ 3 ಲಕ್ಷ ರೂ. ಮೌಲ್ಯದ 6 ಸೆಂಟ್ಸ್ ಖಾಲಿ ನಿವೇಶನ, ಮೈಸೂರಿನಲ್ಲಿ 3 ಲಕ್ಷ ರೂ. ಮೌಲ್ಯದ 40*60 ಖಾಲಿ ನಿವೇಶನ, ಉಳ್ಳಾಲದಲ್ಲಿ 8.50 ಲಕ್ಷ ರೂ. ಮೌಲ್ಯದ 6 ಸೆಂಟ್ಸ್ ಜಮೀನು ಸಹಿತ 68 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.
ಆದಾಯಕ್ಕಿಂತ ಅಧಿಕ ಆಸ್ತಿ: ಜಯರಾಜ್ ಹೊಂದಿರುವ ಒಟ್ಟು ಆಸ್ತಿ 1,78,28,130 ಕೋಟಿ ರೂ. ಮೌಲ್ಯದ್ದಾಗಿದೆ. ಜಯರಾಜ್ ಪ್ರಸ್ತುತ ವೇತನ 82 ಸಾವಿರ ರೂ. ಆಗಿದೆ. ವೇತನದ ಆದಾಯ 65 ಲಕ್ಷ ರೂ, ಪತ್ನಿ ಜಯಶ್ರೀ ಅವರ ವೇತನದ ಆದಾಯ 40 ಲಕ್ಷ ರೂ, ಬ್ಯಾಂಕ್‌ನಿಂದ ಪಡೆದಿರಬಹುದಾದ ಸಾಲ 2 ಲಕ್ಷ ರೂ, ಬಾಡಿಗೆಯಿಂದ ಬರುವ ಆದಾಯ 3 ಲಕ್ಷ ರೂ. ಅಂದಾಜಿಸಲಾಗಿದೆ.
ಜಯರಾಜ್ 40 ಲಕ್ಷ ರೂ. ವೆಚ್ಚ ಮಾಡಿದ್ದು, ಆಸ್ತಿ ಮತ್ತು ವೆಚ್ಚ ಸೇರಿದರೆ 2,18,28,130 ರೂ. ಆಗುತ್ತದೆ. ಅಕ್ರಮವಾಗಿ 1.10 ಕೋಟಿ ರೂ. ಸಂಪಾದಿಸಿದ್ದಾರೆ. ಪಡೆದ ಆದಾಯಕ್ಕೂ ಗಳಿಸಿದ ಸಂಪತ್ತಿನ ನಡುವೆ 1,08,28,130 ರೂ. ಅಸಮತೋಲನ ಕಂಡು ಬಂದಿದೆ.