ಕುಡುಕರ ಅಡ್ಡೆ ಚಿಣ್ಣರ ಪಾರ್ಕ್!

park
Published on

ಪುತ್ತೂರು: ಚಿಣ್ಣರಿಗೆಂದೇ ಪುತ್ತೂರು ನಗರಸಭೆ ಅನುದಾನದಲ್ಲಿ ನಿರ್ಮಾಣಗೊಂಡ ಪುತ್ತೂರು ಚಿನ್ನರ ಪಾರ್ಕ್ ನಿರ್ವಹಣೆಯಿಲ್ಲದೆ ಕುಡುಕರ ಅಡ್ಡವಾಗಿ ಮಾರ್ಪಟ್ಟಿದೆ.

ಪುತ್ತೂರು ನಗರದ ಮಧ್ಯಭಾಗ ಸರ್ಕಾರಿ ಆಸ್ಪತ್ರೆ ಮುಂಭಾಗದ ವಿಶಾಲ 0.5 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ 13 ಲಕ್ಷ ರೂ ವೆಚ್ಚದಲ್ಲಿ 8 ವರ್ಷದ ಹಿಂದೆ ಚಿಣ್ಣರ ಪಾರ್ಕ್ ನಿರ್ಮಿಸಲಾಗಿತ್ತು. 1ವರ್ಷ ಮಾತ್ರ ನಗರಸಭೆಯಿಂದ ನಿರ್ವಹಣೆ ಮಾಡಿ ನಂತರ ಹಾಗೆಯೇ ಬಿಡಲಾಗಿತ್ತು ಪ್ರಸ್ತುತ ಸುಸಜ್ಜಿತ ಸ್ಥಿತಿಯಲ್ಲಿರುವ ಈ ಚಿಣ್ಣರ ಪಾರ್ಕ್‌ನಲ್ಲಿ ಮಕ್ಕಳ ಆಟಕ್ಕಿಂತ ಕುಟುಕರ ಮೋಜಿನ ಸ್ಥಳವಾಗಿ ಮಾರ್ಪಟ್ಟಿದೆ.

ಪುತ್ತೂರು ನಗರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಮಕ್ಕಳ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಪಾಳು ಬೀಳಲಾರಂಭಿಸಿದೆ. 2009-10ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ರಾಜೇಶ್ ಬನ್ನೂರು ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಈ ಪಾರ್ಕ್ ತನ್ನ ಉದ್ಧೇಶಿತ ಗುರಿಯನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಾರ್ಕ್‌ನಲ್ಲಿ ಮಕ್ಕಳಿಗಾಗಿ ಗುಹೆ, ಮಕ್ಕಳ ನಾಟಕ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗಾಗಿ ಬಯಲು ರಂಗ ಮಂದಿರ ಹೀಗೆ ಎಲ್ಲವನ್ನೂ ಕಲ್ಪಿಸಲಾಗಿದೆ. ಆದರೆ ಪಾರ್ಕ್ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಬಿಟ್ಟುಕೊಟ್ಟ ಬಳಿಕ ಬೆರಳೆಣಿಕೆಯ ಕಾರ್ಯಕ್ರಮಗಳು ಆಗಿದ್ದು ಬಿಟ್ಟರೆ ಇಲ್ಲಿ ಮಕ್ಕಳಿಗಾಗಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.

ಮಕ್ಕಳಿಂದ ದೂರವಾದ ಪಾರ್ಕ್: ಪಾರ್ಕ್‌ನ್ನು ನಿರ್ವಹಣೆ ಮಾಡದ ಪರಿಣಾಮ ಮಕ್ಕಳಿಲ್ಲದೆ ಉದ್ಯಾನವನ ಸಂಪೂರ್ಣಕಳೆಗುಂದಿದೆ. ಮಕ್ಕಳ ಜೊತೆಗೆ ಬರುತ್ತಿದ್ದ ಪಾಲಕರೂ ಈ ಪಾರ್ಕ್‌ನ ಅವ್ಯವಸ್ಥೆ ಕಂಡು ಇತ್ತ ಸುಳಿದಾಡುವುದನ್ನೇ ನಿಲ್ಲಿಸಿದ್ದಾರೆ.

ಪುತ್ತೂರು ನಗರಸಭಾ ಚಿಣ್ಣರ ಪಾರ್ಕ್‌ನ್ನು ಪುನಚ್ಚೇತನಗೊಳಿಸಲು ನಗರಸಭಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಪಾರ್ಕ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರನ್ನು ಆಕರ್ಷಿಸುವ ಕೇಂದ್ರವಾಗಿ ಮಾರ್ಪಡಿಸುವ ಯೋಜನೆಯಿದೆ. ಸಂಜೀವ ಮಠಂದೂರು, ಪುತ್ತೂರು ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net