

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಬಳಿ ಜೀವಂತ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕು ಕುಳ್ಳೂರು ಗ್ರಾಮದ ಮಾದೇಶ್ (32), ತಮಿಳುನಾಡಿನ ಸತ್ತಿ ತಾಲೂಕು ಕಾನಗೆರೆ ಗ್ರಾಮದ ಶಿವಕುಮಾರ್(22), ಪಿರಿಯಾಪಟ್ಟಣ ತಾಲೂಕಿನ ಆನಂದನಗರ ಗ್ರಾಮದ ಜಾಕೀರ್ ಷರೀಫ್ (31) ಬಂಧಿತರು. ಇವರಿಂದ ಮೂರು ಜೀವಂತ ನಕ್ಷತ್ರ ಆಮೆಗಳು, ಒಂದು ಕಾರನ್ನು ಜಪ್ತಿ ಮಾಡಲಾಗಿದೆ.
ಇವರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಮೆಗಳನ್ನು ಹಿಡಿದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಸಾಗಣೆ ಮಾಡುತ್ತಿರುವ ವೇಳೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ವಿಜಯರಾಜ್, ರಾಮಚಂದ್ರ, ಬಸವರಾಜು, ಶಂಕರ್, ಸ್ವಾಮಿ ಲತಾ, ಬಸವರಾಜು, ಚಾಲಕ ಪ್ರಭಾಕರ್ ಭಾಗವಹಿಸಿದ್ದರು.