ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಅಕ್ಕಿ ವಶ

9-kollegalphoto-2
ಆಪೆ ಗೂಡ್ಸ್ ಆಟೋದಲ್ಲಿ ಪಡಿತರ ಅಕ್ಕಿಯನ್ನು ಶನಿ ವಾರ ರಾತ್ರಿ ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವುದು. ಸುಪ್ರೀತ್, ದುಂಡಪ್ಪ ಪೂಜಾರಿ, ವಿಜಯ ಕುಮಾರ್, ಪುಡರಿಂಕ ಚೌಹಣ್ ಇದ್ದಾರೆ.
Published on

ಕೊಳ್ಳೇಗಾಲ: ಸರ್ಕಾರ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಆಪೆ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದವನನ್ನು ಶನಿವಾರ ರಾತ್ರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ, 762 ಕೆ.ಜಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ನಾಯಕರ ದೊಡ್ಡ ಬೀದಿ ನಿವಾಸಿ ಈಶ್ವರ್ (46) ಬಂಧಿತ ಆರೋಪಿ.

ಕೊಳ್ಳೇಗಾಲ-ಬೆಂಗಳೂರು ಹೆದ್ದಾರಿ ರಸ್ತೆಯ ನರೀಪುರ ಕ್ರಾಸ್ ಬಳಿ ಅಕ್ರಮ ಪಡಿತರ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಮತ್ತು ತಂಡ ಹಾಗೂ ಆಹಾರ ನಿರೀಕ್ಷಕ ಪ್ರಸಾದ್ ಅವರು ಕಾರ್ಯಾಚರಣೆ ನಡೆಸಿದ್ದು. ಈ ವೇಳೆ ಕೊಳ್ಳೇಗಾಲ ಕಡೆಯಿಂದ ಮಳವಳ್ಳಿ ಕಡೆಗೆ ಪಡಿತರ ತುಂಬಿದ ಆಪೆ ಆಟೋವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಚಾಲಕ ಈಶ್ವರ್ ತಡಬಡಿಸಿದ್ದು. ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ 14 ಮೂಟೆಯಲ್ಲಿದ್ದ 762 ಕೆ.ಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸಾಗಣೆಗೆ ಬಳಸಿದ್ದ ಆಪೆ ಆಟೋವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಬಡಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮಳವಳ್ಳಿ ಕಡೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ದುಂಡಪ್ಪ ಪೂಜಾರಿ, ವಿಜಯಕುಮಾರ್, ಪುಡರಿಂಕ ಚೌಹಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net