

ವಿಜಯಪುರ: ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಅಬಕಾರಿ ಪೊಲೀಸರು ಅಂದಾಜು 40 ಸಾವಿರ ರೂ.ಗಳ 950 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇಂಡಿ ವಲಯದ ರೂಗಿ-ಅಥರ್ಗಾ ಮಾರ್ಗದಲ್ಲಿರುವ ಪೀರಾಪುರ ದರ್ಗಾ ಹತ್ತಿರ ಮಂಗಳವಾರ ದಾಳಿ ನಡೆಸಿದ ಅಬಕಾರಿ ಪೊಲೀಸರು ಆರೋಪಿ ಸೋಮನಿಂಗ ಅಣ್ಣಪ್ಪ ಗುಡಿ ಎಂಬಾತನನ್ನು ಬಂಧಿಸಿದ್ದಾರೆ. ಇವನು ತನ್ನ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ಅಬಕಾರ ಅಪರ ಆಯುಕ್ತ ಡಾ.ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ ಖಿಲ್ಲೇದಾರ ಹಾಗೂ ಉಪಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮಾರ್ಗದರ್ಶನದಲ್ಲಿ ಅಬಕಾರಿ ಉಪಅಧೀಕ್ಷಕ ಎಲ್.ಎಸ್.ಸಲಗರೆ ನೇತೃತ್ವದ ತಂಡ ದಾಳಿ ನಡೆಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.