

| ಗಿರೀಶ್ ಗರಗ ಬೆಂಗಳೂರು
ಬಿಡಿಎ ಮೂಲೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಿದ ನಂತರ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಅದರಂತೆ, ನಿವೇಶನ ಹಂಚಿಕೆಯಲ್ಲಿ ನಕಲಿ ಕ್ರಯಪತ್ರಕ್ಕೆ ಕಾನೂನುಬಾಹಿರವಾಗಿ ಸ್ವಾಧೀನ ಪತ್ರ ನೀಡಿರುವುದು ಬಯಲಾಗಿದ್ದು, ದ್ವಿತೀಯ ದರ್ಜೆ ಗುಮಾಸ್ತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ನಿವೇಶನಗಳ ಹಂಚಿಕೆಯಲ್ಲಿ ನಕಲಿ ಕ್ರಯಪತ್ರಕ್ಕೆ ಸ್ವಾಧೀನ ಪತ್ರ ನೀಡಿರುವುದು ಹಾಗೂ ನಿವೇಶನದ ಮೌಲ್ಯ ಕಡಿಮೆ ಮಾಡಿ ಹಂಚಿಕೆ ಮಾಡಿರುವುದು ಸಾಬೀತಾಗಿದೆ. ಈ ಅಕ್ರಮಗಳ ಕುರಿತಂತೆ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸಿರುವ ಬಿಡಿಎ, ತಪ್ಪಿತಸ್ಥ ಗುಮಾಸ್ತ ಬಿ. ವೆಂಕಟರಮಣಪ್ಪನನ್ನು ಅಮಾನತು ಮಾಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗಿದೆ.
ದರ ತಿದ್ದಿ ಅಕ್ರಮ: ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 1ನೇ ಬ್ಲಾಕ್ನಲ್ಲಿ ವ್ಯಕ್ತಿಯೊಬ್ಬರಿಗೆ ಕಂದಾಯ ನಿವೇಶನಕ್ಕೆ ಬದಲಾಗಿ 3040 ಅಡಿ ಅಳತೆಯ ನಿವೇಶನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಮಾರ್ಗಸೂಚಿ ದರ ಚದರ ಮೀ.ಗೆ 29,600 ರೂ. ನಿಗದಿ ಮಾಡಿದ್ದು, ಅದರಂತೆ ನಿವೇಶನಕ್ಕೆ 31,96,800 ರೂ. ಪಾವತಿಸಿಕೊಳ್ಳಬೇಕಿರುತ್ತದೆ. ಆದರೆ, ಹಂಚಿಕೆದಾರರಿಗೆ ಲಾಭ ಮಾಡಿಕೊಡಲು ಕಡತದಲ್ಲಿನ ಟಿಪ್ಪಣಿಯ ನಿಗದಿ ಮಾಡಲಾದ ದರದ ಮೇಲೆ ವೈಟ್ನರ್ ಹಾಕಿ, 31.96 ಲಕ್ಷ ರೂ.ಗೆ ಬದಲಾಗಿ 12.78 ಲಕ್ಷ ರೂ. ಎಂದು ನಮೂದಿಸಲಾಗಿದೆ. ಅಲ್ಲದೆ, ಕಡಿಮೆ ಮೊತ್ತವನ್ನು ಪಾವತಿಸಿಕೊಂಡು ಪ್ರಾಧಿಕಾರಕ್ಕೆ ನಷ್ಟವುಂಟು ಮಾಡಲಾಗಿದೆ.
ನಿವೇಶನ ಸಂಖ್ಯೆಯೇ ಬದಲು: ಅದೇ ರೀತಿ ವ್ಯಕ್ತಿಯೊಬ್ಬರಿಗೆ ಸೇರಿದ ಕಂದಾಯ ನಿವೇಶನವನ್ನು ಸರ್ ಎಂವಿ ಬಡಾವಣೆ ನಿರ್ವಣಕ್ಕೆ ಬಳಸಲಾಗಿದ್ದು, ಅದಕ್ಕೆ ಬದಲಾಗಿ ಸರ್ ಎಂವಿ ಬಡಾವಣೆಯ 6ನೇ ಬ್ಲಾಕ್ನಲ್ಲಿ ನಿವೇಶನ ಸಂಖ್ಯೆ 3185/ಎ ನಲ್ಲಿನ 3040 ನಿವೇಶನ ನೀಡುವಂತೆ ಸೂಚಿಸಲಾಗಿತ್ತು. ಆದರೆ, ನಿವೇಶನದ ಸಂಖ್ಯೆಯನ್ನು ಕಡತದಲ್ಲಿ ತಿದ್ದಿ, ಬೇರೆ ನಿವೇಶನವನ್ನು ನೀಡಲಾಗಿದೆ. ಅದರ ಜತೆಗೆ ನಿವೇಶನಕ್ಕೆ 2018ರಲ್ಲಿ ನಿಗದಿ ಮಾಡಲಾಗಿದ್ದ ಮೂಲ ದರವನ್ನು ಪಾವತಿಸಿಕೊಳ್ಳದೆ, 2015ರಲ್ಲಿ ನಿಗದಿ ಮಾಡಲಾಗಿದ್ದ ಹಳೆಯ ದರವನ್ನು ಪಡೆಯಲಾಗಿದೆ.
ಹಾಗೆಯೇ, 2019ರ ಜನವರಿಯಲ್ಲಿ ತಿದ್ದುಪಡಿ ಮಾಡಿ ಹಂಚಿಕೆ ಮಾಡಲಾದ ನಿವೇಶನ ಸಂಖ್ಯೆ 439ಕ್ಕೆ ಶುದ್ಧ ಕ್ರಯಪತ್ರ ಮತ್ತು ಸ್ವಾಧೀನ ಪತ್ರವನ್ನು ನೀಡಲಾಗಿತ್ತು. ನಂತರ 2019ರ ಫೆಬ್ರವರಿಯಲ್ಲಿ ಎರಡೂ ಪ್ರಮಾಣ ಪತ್ರ ರದ್ದು ಮಾಡಲಾಗಿತ್ತು. ಅದರ ನಂತರ ಮೂಲ ಹಂಚಿಕೆ ಪತ್ರ, ಶುದ್ಧ ಕ್ರಮಪತ್ರ ಮತ್ತು ಸ್ವಾಧೀನ ಪತ್ರಗಳನ್ನು ಹಿಂಪಡೆದಿಲ್ಲ. ಸಂ. 439 ಮೂಲೆ ನಿವೇಶನವಾಗಿದ್ದು, ಈ ಕುರಿತು ಕಡತ ಪರಿಶೀಲಿಸಿದಾಗ ಮೂಲೆ ನಿವೇಶನವನ್ನು ಅಕ್ರಮವಾಗಿ ಈಗಾಗಲೇ ಹಂಚಿಕೆ ಮಾಡಿರುವುದು ತಿಳಿದುಬಂದಿದೆ.
ತನಿಖಾಧಿಕಾರಿ ವಿರುದ್ಧವೇ ಆರೋಪ
ಬಿಡಿಎ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮಾಡಲಾಗಿರುವ ಅಕ್ರಮದ ಬಗ್ಗೆ ಬಿಡಿಎ ಪೊಲೀಸ್ ಅಧೀಕ್ಷಕರು ತನಿಖೆ ನಡೆಸಿ ನೀಡಿದ ವರದಿಯ ಬಗ್ಗೆಯೇ ಆರೋಪಿ ವೆಂಕಟರಮಣಪ್ಪ ಅಪಸ್ವರ ಎತ್ತಿದ್ದಾನೆ. ವೆಂಕಟರಮಣಪ್ಪ ಈ ಹಿಂದೆ ಇಂತಹದ್ದೇ ವಿಚಾರವಾಗಿ 2 ಬಾರಿ ಅಮಾನತಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವೆಂಕಟರಮಣ ತನಗೆ ನೀಡಿದ್ದ ನೋಟಿಸ್ಗೆ ಉತ್ತರಿಸಿ ವರದಿಯಲ್ಲಿನ ಅಂಶಗಳು ಸತ್ಯಕ್ಕೆ ದೂರವಾದದ್ದು ಎಂದು ಬಿಡಿಎ ಆಯುಕ್ತರಿಗೆ ಸಲ್ಲಿಸಿದ್ದ. ಇದು ತನಿಖಾಧಿಕಾರಿ ವಿರುದ್ಧವೇ ಆರೋಪ ಮಾಡಿದಂತಿದ್ದು, ಈ ಎಲ್ಲ ಆರೋಪಗಳು ಇಲಾಖಾ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಬಿಡಿಎ ಆಯುಕ್ತರು ಆದೇಶಿಸಿದ್ದಾರೆ.
ಬಿಡಿಎಗೆ ನಷ್ಟ, ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಹಂಚಿಕೆ, ನಿವೇಶನ ಮೌಲ್ಯವನ್ನು ಕಡತದಲ್ಲಿ ತಿದ್ದಿರುವುದು ಹೀಗೆ ಹಲವು ಆರೋಪಗಳು ಇಲಾಖಾ ತನಿಖೆ ವೇಳೆ ಸಾಬೀತಾಗಿದೆ. ಹೀಗಾಗಿ ಗುಮಾಸ್ತ ಬಿ.ವೆಂಕಟರಮಣಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕ್ರಿಮಿನಲ್ ಪ್ರಕರಣ ದಾಖಲಿಸಲೂ ಚಿಂತನೆ ನಡೆಸಲಾಗಿದೆ. | ಡಾ. ಎಚ್.ಆರ್. ಮಹದೇವ್ ಆಯುಕ್ತ
ದಾಖಲೆ ನೀಡದ ಗುಮಾಸ್ತ
ವ್ಯಕ್ತಿಯೊಬ್ಬರಿಗೆ ಪುನರ್ವಸತಿ ಅಡಿಯಲ್ಲಿ ಬನಶಂಕರಿ 3ನೇ ಹಂತದ ನಿವೇಶನ ಸಂಖ್ಯೆ 170 ಅನ್ನು 2019ರ ಜನವರಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಅದರೆ, ಅದೇ ವ್ಯಕ್ತಿಗೆ ಗುಮಾಸ್ತ ವೆಂಕಟರಮಣಪ್ಪ ಕಡತ ತಿದ್ದಿ ಬಿಟಿಎಂ 4ನೇ ಹಂತದ ಬಡಾವಣೆಯಲ್ಲಿ 612 ಮೀ. ಅಳತೆಯ ಮತ್ತೊಂದು ನಿವೇಶನ ಹಂಚಿಕೆ ಮಾಡಿದ್ದಾನೆ. ಅಲ್ಲದೆ, ಬಿಟಿಎಂ ಬಡಾವಣೆಯಲ್ಲಿ ಹಂಚಿಕೆ ಮಾಡಲಾದ ನಿವೇಶನದ ಮೊತ್ತ 13.90 ಲಕ್ಷ ರೂ. ಬಿಡಿಎಗೆ ಸಂದಾಯವಾಗಿರುವ ಬಗ್ಗೆ ದಾಖಲೆಗಳನ್ನು ನೀಡಿಲ್ಲ. ನಿವೇಶನ ಪಡೆದವರು 46.60 ಲಕ್ಷ ರೂ.ಗೆ ಶುದ್ಧ ಕ್ರಯಪತ್ರದೊಂದಿಗೆ ಅನ್ಯರಿಗೆ ಮಾರಾಟ ಮಾಡಿದ್ದಾರೆ. ಹೀಗೆ ಒಬ್ಬರಿಗೇ 2 ನಿವೇಶನ ನೀಡಿ ಬಿಡಿಎಗೆ ನಷ್ಟ ಮಾಡಲಾಗಿದೆ.