

ಲಿಂಗಸುಗೂರು: ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಸಾಮಗ್ರಿ ಖರೀದಿ ಮತ್ತು ದುರಸ್ತಿ ಹೆಸರಲ್ಲಿ ಅಕ್ರಮವಾಗಿದ್ದು ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಬುಧವಾರ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ವಸತಿ ನಿಲಯಗಳ ದುರಸ್ತಿ ಹಣವನ್ನು ಕೆಟಿಟಿಪಿ ಪ್ರಕಾರ ಪಾರದರ್ಶಕವಾಗಿ ನಿಯಮ ಪಾಲಿಸದೆ ಲೂಟಿ ಮಾಡಲಾಗಿದೆ. ಟೆಂಡರ್‌ನ ಕರಾರಿನಂತೆ ಆಹಾರಧಾನ್ಯ ಪೂರೈಸುವ ಬೆಂಗಳೂರಿನ ಗುತ್ತಿಗೆದಾರರು ಗುಣಮಟ್ಟದ ಆಹಾರ ಧಾನ್ಯ ಪೂರೈಸದೆ ನೇರವಾಗಿ ಪ್ರತಿ ತಿಂಗಳು ವಸತಿ ನಿಲಯ ಮೇಲ್ವಿಚಾರಕರಿಗೆ ಹಣ ಪಾವತಿಸುತ್ತಾರೆ.
ವಾರ್ಡನ್‌ಗಳು ಕಡಿಮೆ ದರದ ಕಳಪೆ ಆಹಾರಧಾನ್ಯ ಖರೀದಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಜ್ಜಲಗುಡ್ಡದ ಹಾಸ್ಟೆಲ್ ಮಕ್ಕಳಿಗೆ ಏಳೆಂಟು ವರ್ಷಗಳಿಂದ ಮೊಟ್ಟೆ, ಚಿಕನ್ ವಿತರಿಸದೆ ಸುಳ್ಳು ಲೆಕ್ಕ ತೋರಿಸಿದ ವಾರ್ಡನ್‌ನನ್ನು ಅಮಾನತು ಮಾಡಬೇಕು. ತಾಲೂಕಿನಲ್ಲಿ ಹತ್ತು ವರ್ಷಕ್ಕೂ ಹೆಚ್ಚು ವರ್ಷಗಳಿಂದ ಇರುವ ವಾರ್ಡನ್‌ಗಳನ್ನು ವರ್ಗಾವಣೆ ಮಾಡಬೇಕು. ತಾಲೂಕು ಕಚೇರಿಯ ಕ್ಲರ್ಕ್‌ಗಳಿಗೆ ವಾರ್ಡನ್ ನೌಕರಿ ನೀಡಲಾಗಿದೆ. ಕೂಡಲೇ ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಉಪಾಧ್ಯಕ್ಷ ಬಸವರಾಜ ಪೇರಿ, ರಾಜೇಶ ಮಾಣಿಕ್, ಮುತ್ತಣ್ಣ ಗುಡಿಹಾಳ, ಮಹಾಂತೇಶ ಹೂಗಾರ, ರಾಜುರೆಡ್ಡಿ, ಆಂಜನೇಯ ನಾಯಕ, ಜೀವಾ ನಾಯ್ಕ, ಮೌನೇಶ ನಾಯಕ, ಜಗನ್ನಾಥ ಜಾಧವ, ಬಸವರಾಜ ಗುಂಡಸಾಗರ, ಪ್ರಕಾಶ ಮಡ್ಡಿಕಾರ, ಮಂಜುನಾಥ, ಈಶ್ವರ ವಿಶ್ವಕರ್ಮ, ರಾಘು ನಾಯಕ, ಅಮರೇಶ ಪವಾರ, ದುರುಗಪ್ಪ ಇದ್ದರು.