ಗೋವಿಂದಾಪುರ ಆಶ್ರಯ ಮನೆಗಳ ಹಂಚಿಕೆಯಲ್ಲಿ ಅಕ್ರಮ

congress dist president R.prasannakumar
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿದರು. ಮಖಂಡರಾದ ಎಚ್.ಸಿ.ಯೋಗೇಶ್, ಸಿ.ಎಸ್.ಚಂದ್ರಭೂಪಾಲ್ ಇದ್ದರು.
Published on

ಶಿವಮೊಗ್ಗ: ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ಮೊದಲ ಹಂತದ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಆರೋಪಿಸಿದರು.

ಮನೆಗಳನ್ನು ನೈಜ ಫಲಾನುಭವಿಗಳ ಬದಲು ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯ ಆಗಿರುವವರಿಗೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅನರ್ಹರಿಗೆ ನೀಡಿರುವ ಮನೆಗಳನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋವಿಂದಾಪುರ, ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಸರಿಯಾದ ರಸ್ತೆ ಇಲ್ಲ. ಆದರೂ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಆಯುಕ್ತರ ಮೇಲೆ ಒತ್ತಡ ತಂದು ತರಾತುರಿಯಲ್ಲಿ ಮನೆಗಳ ಹಂಚಿಕೆಗೆ ಮುಂದಾಗಿದ್ದಾರೆ. ಸಚಿವರಾದ ಜಮೀರ್ ಅಹಮ್ಮದ್, ಮಧು ಬಂಗಾರಪ್ಪ ಅವರನ್ನು ಸಭೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ದೂರಿದರು.

ಮೊದಲ ಹಂತದಲ್ಲಿ ವಿತರಣೆ ಆಗಿರುವ 600 ಮನೆಗಳಲ್ಲಿ ಅರ್ಧಕ್ಕಿಂತ ಅಧಿಕ ಅನರ್ಹರಿಗೆ ನೀಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿ ಮೂಲ ಸೌಲಭ್ಯಕ್ಕೆ ಅವಕಾಶ ಇಲ್ಲದಂತೆ ವಸತಿ ಯೋಜನೆ ರೂಪಿಸಲಾಗಿತ್ತು. ಅದು ಗಮನಕ್ಕೆ ಬರುತ್ತಿದ್ದಂತೆ ಸಚಿವ ಮಧು ಬಂಗಾರಪ್ಪ ಅವರು ವಸತಿ ಸಚಿವರೊಂದಿಗೆ ಚರ್ಚಿಸಿ 15 ಕೋಟಿ ರೂ. ಕೊಡಿಸಲು ಮುಂದಾಗಿದ್ದರು. ಆದರೆ ಸೌಜನ್ಯಕ್ಕೂ ಅವರನ್ನು ಸಭೆಗೆ ಕರೆಯದೆ ಫಲಾನುಭವಿಗಳ ಆಯ್ಕೆ ಮಾಡಲು ಮುಂದಾಗಿರುವುದು ಹಕ್ಕುಚ್ಯುತಿ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದರು.

ಮಖಂಡರಾದ ಎಸ್.ರವಿಕುಮಾರ್, ಎಚ್.ಸಿ.ಯೋಗೇಶ್, ಸಿ.ಎಸ್.ಚಂದ್ರಭೂಪಾಲ್, ಬಿ.ಎ.ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ರೇಖಾ ರಂಗನಾಥ, ಜಿ.ಡಿ.ಮಂಜುನಾಥ, ಕಲೀಂ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net