

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆಂದು ಮಾಡಿರುವ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ. ಅಂತೆಯೇ ಕೆಲ ದಲ್ಲಾಳಿಗಳು ಅಮಾಯಕ ರೈತರನ್ನು ವಂಚಿಸಿ ಕೋಟ್ಯಂತರ ರೂ ವಂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಭೂ ಸ್ವಾಧೀನದಲ್ಲಿ ಅಕ್ರಮ ಸಂಬಂಧ ಜಿಪಂನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ ಮತ್ತು ರಮೇಶ ಬಂಡಿಸಿದ್ದೇಗೌಡ ವಿಷಯ ಪ್ರಸ್ತಾಪಿಸಿದರು. ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಗುಂಟೆ ಜಮೀನಿಗೆ ವಿವಿಧ ಬೆಲೆಗಳನ್ನು ನೀಡಿ ವಂಚಿಸಿದ್ದಾರೆ. ಈ ಬಗ್ಗೆ ದಾಖಲೆ ನೀಡಲು ಬದ್ಧನಾಗಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ರಮೇಶ ಬಂಡಿಸಿದ್ದೇಗೌಡ ಒತ್ತಾಯಿಸಿದರು.
ಮಾತ್ರವಲ್ಲದೆ ಅನ್ಯಕ್ರಾಂತ ಮಂಜೂರಾಗದ ಜಮೀನುಗಳಿಗೂ ಹೆಚ್ಚುವರಿ ಹಣ ಪಾವತಿಸಲಾಗಿದೆ. ಸೆಟ್‌ಬ್ಯಾಕ್ ಜಾಗಕ್ಕೂ ಕೋಟ್ಯಂತರ ರೂ ಪರಿಹಾರ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ರವಿಕುಮಾರ್ ಗಣಿಗ ಆಗ್ರಹಿಸಿದರು. ಶಾಸಕರ ಮಾತಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ, ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಿ ಅವ್ಯವಹಾರ ಸಂಬಂಧ ವರದಿ ನೀಡುವಂತೆ ಸೂಚಿಸಿದರು.