

ಯಲಬುರ್ಗಾ: ಗ್ರಾಪಂ ಸದಸ್ಯರು ವಿವಿಧ ಇಲಾಖೆ ಯೋಜನೆಗಳ ಮಾಹಿತಿ ಪಡೆದು, ಜನಸಾಮಾನ್ಯರಿಗೆ ಒದಗಿಸುವ ಕಾರ್ಯ ಮಾಡಲಿ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾನುವಾರ ಮಾತನಾಡಿದರು. ಬಹುತೇಕ ಸದಸ್ಯರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಜನರು ಸೌಲಭ್ಯಕ್ಕಾಗಿ ಇಲಾಖೆಗಳಿಗೆ ಅಲೆದಾಡುವಂತಾಗಿದೆ. ಜನರಿಗೆ ಅನುಕೂಲವಾಗಲೆಂದು ಪ್ರತಿ 6 ತಿಂಗಳಿಗೊಮ್ಮೆ ಹೋಬಳಿ ಹಂತದಲ್ಲಿ ಸಭೆ ನಡೆಸಲು ತಿರ್ಮಾನಿಸಲಾಗಿದೆ ಎಂದರು.
ಯೋಜನೆಗಳನ್ನು ಜನರಿಗೆ ತಲುಪಿಸಲು ಕೆಳ ಹಂತದ ಅಧಿಕಾರಿಗಳು ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಶಾಸಕ ಬಸವರಾಜ ರಾಯರೆಡ್ಡಿ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ 390 ಗ್ರಾಮಗಳಿಗೆ 763 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರ ಮಾಡಿ ಅನುಷ್ಠಾನ ಮಾಡಿದ್ದಾರೆ. ಜೆಜೆಎಂ ಯೋಜನೆಯಡಿ ಕೆಲ ಗುತ್ತಿಗೆದಾರರಿಂದ ಅಕ್ರಮ ನಡೆದಿದೆ ಎಂದು ದೂರುಗಳಿದ್ದು, ಅಂತಹವರನ್ನ ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ಸೂಚನೆ ನೀಡಲಾಗುವುದು. ಜತೆಗೆ ಯೋಜನೆ ಸಮರ್ಪಕವಾಗಿ ಪೂರೈಸಲು ಕ್ರಮವಹಿಸಲಾಗುವುದು.
ಬೇಸಿಗೆ ಹಿನ್ನಲೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಗಮನಹರಿಸಿ. ಕೆರೆ ತುಂಬಿಸುವ ಯೋಜನೆಯಿಂದ 28 ಕೆರೆಗಳು ಭರ್ತಿಯಾಗಿವೆ. ಇದರಿಂದ ರೈತರ ಕೊಳವೆ ಬಾವಿಯಲ್ಲಿ ಅಂತರ್ಜಲ ವೃದ್ಧಿಯಾಗಿ ತೋಟಗಾರಿಕೆ ಬೆಳೆಗೆ ಅನುಕೂಲವಾಗಿದೆ. ಹೆಚ್ಚುವರಿ ನೀರನ್ನು ತಡೆಗಟ್ಟಿ ಕೃಷಿಹೊಂಡ ನಿರ್ಮಾಣಕ್ಕೆ ಮುಂದಾಗಬೇಕು. ನಾಲಾಗಳಿಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಚಿವರ ಗಮನಕ್ಕೆ ತರಲಾಗುವುದು.
ಆವಾಸ ಯೋಜನೆಯಿಂದ ಫಲಾನುಭವಿಗಳಿಗೆ ಪರಿಹಾರ ಸಿಗದಿರುವುದರ ಬಗ್ಗೆ ಮಾಹಿತಿ ಇದೆ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ರಾಜಶೇಖರ ಹಿಟ್ನಾಳ ಹೇಳಿದರು. ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ತಳವಾರ, ದಿಶಾ ಸಮಿತಿ ಸದಸ್ಯೆ ಡಾ.ನಂದಿತಾ ದಾನರೆಡ್ಡಿ, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಕೆರಿಬಸಪ್ಪ ನಿಡಗುಂದಿ ಇತರರಿದ್ದರು.