

ಚಿಕ್ಕಬಳ್ಳಾಪುರ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ತಡೆದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗೋ ರಕ್ಷಕರ ಮೇಲೆ ದಾಳಿ ನಡೆಸಿದ್ದು ವಾಹನಗಳನ್ನು ಜಖಂಗೊಳಿಸಿದ ಬಳಿಕ ಪರಾರಿಯಾಗಿದ್ದಾರೆ.
ನಗರದಲ್ಲಿನ ಸಂಚಾರಿ ಪೊಲೀಸ್ ಠಾಣೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಮುಂಜಾವ ನಡೆದ ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಗುಂಪಿನ ದಾಳಿಯು ಭಯ ಬೀಳಿಸುವಂತಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕ್ಯಾಂಟರ್ ಚಾಲಕ ಇಮ್ರಾನ್‌ನರನ್ನು ವಶಪಡಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.
*28 ಹಸುಗಳ ವಶ*
ಖಚಿತ ಮಾಹಿತಿ ಮೇರೆಗೆ ದೀನದಯಾಳ್ ಗೋವು ರಕ್ಷಣಾ ಪಡೆಯು ಮುಂಜಾವದಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೆಂಗಳೂರಿಗೆ ಸಾಗುತ್ತಿದ್ದ ಕ್ಯಾಂಟರ್ ವಾಹನವನ್ನು ತಡೆದಿದೆ. ಒಳಗೆ ಪರಿಶೀಲಿಸಿದಾಗ ಇಕ್ಕಿಟ್ಟಿನ ಜಾಗದಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿತ್ತು. ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಂತೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ, ಪರಾರಿಯಾಗಿದೆ. ಇದರ ನಡುವೆಯೂ ಗೋವು ರಕ್ಷಕರು ಕ್ಯಾಂಟರ್ ಚಾಲಕ ಇಮ್ರಾನ್ ರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ 28 ಹಸುಗಳನ್ನು ರಕ್ಷಿಸಲಾಗಿದೆ. ಸರ್ಕಾರಿ ಗೋವಿನ ಶಾಲೆಗೆ ಕಳುಹಿಸಲಾಗಿದೆ.
*ವಾಹನಗಳ ಜಖಂ*
ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಹಿಂಭಾಗ ಬೇರೆ ಬೇರೆ ಗಾಡಿಗಳಲ್ಲಿ ಬರುತ್ತಿದ್ದ ದುಷ್ಕರ್ಮಿಗಳು ಗೋವು ರಕ್ಷಕರು ಕಾಣುತ್ತಿದ್ದಂತೆ ಮುಗಿ ಬಿದ್ದಿದ್ದಾರೆ. ದೊಣ್ಣೆ, ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಇದೇ ಒಬ್ಬ ಗೋರಕ್ಷಕನಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಹಲ್ಲೆಯ ಆತಂಕದಲ್ಲಿ ಸ್ಥಳದಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ. ಇದರ ನಡುವೆ ಕೋಪದಲ್ಲಿ ಸ್ಥಳದಲ್ಲಿನ ಕಾರು, ಇತರ ವಾಹನಗಳ ಗಾಜನ್ನು ಹೊಡೆದು ಹಾಕಿದ್ದಾರೆ. ಕಲ್ಲುಗಳನ್ನು ತೂರಿದ್ದಾರೆ. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ದಾಳಿಯ ಸಂದರ್ಭದಲ್ಲಿ ಅದೃಷ್ಟವಶಾತ್ ತಪ್ಪಿಸಿಕೊಂಡು ಸ್ವಯಂ ಸೇವಕರು ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
*ಬೆಂಗಾವಲಿನ ವ್ಯವಸ್ಥೆಯಲ್ಲಿ ದಂಧೆ*
ಆಂಧ್ರದಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ಚಿಕ್ಕಬಳ್ಳಾಪುರ ಹಾಗೂ ಹೈದರಾಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೪೪ ರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ. ಅಕ್ರಮ ಕಸಾಯಿಖಾನೆಗಳಿಗೆ ಮಾರುತ್ತಿದ್ದು ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿ ನಡುವೆಯೂ ಲಕ್ಷಾಂತರ ರೂ ದಂಧೆ ನಿರಂತರವಾಗಿ ನಡೆಯುತ್ತಿದೆ. ಪೊಲೀಸರು, ಸಾರಿಗೆ ಅಧಿಕಾರಿಗಳು ಹಾಗೂ ಗೋವು ರಕ್ಷಕರು ಸೇರಿದಂತೆ ಹಲವರು ಗೋವುಗಳನ್ನೊಳಗೊಂಡ ವಾಹನಗಳನ್ನು ತಡೆಯುವುದರಿಂದ ತಪ್ಪಿಸಿಕೊಳ್ಳಲು ಬೆಂಗಾವಲಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕ್ಯಾಂಟರ್, ಕಂಟೈನರ್ ವಾಹನಗಳ ಮುಂಭಾಗ ದ್ವಿಚಕ್ರ ವಾಹನ ಇಲ್ಲವೇ ಇತರೆ ವಾಹನಗಳಲ್ಲಿ ದಂಧೆ ಕೋರರು ಪ್ರಯಾಣಿಸುತ್ತಾರೆ. ಹೆದ್ದಾರಿಯಲ್ಲಿ ಯಾವುದೇ ತಪಾಸಣೆ, ತಡೆ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಗೋವುಗಳ ವಾಹನಗಳು ಹೋಗಲು ಗ್ರೀನ್ ಸಿಗ್ನಲ್ ನೀಡುತ್ತಾರೆ. ಒಂದು ವೇಳೆ ಅಡಚಣೆ ಉಂಟಾದಲ್ಲಿ ಮಾರ್ಗ ಬದಲಾವಣೆಯಾಗುತ್ತದೆ. ಇದರಿಂದ ಕಡಿಮೆ ಪ್ರಕರಣದಲ್ಲಿ ದಂಧೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗೋವುಗಳ ಮಾರಣ ಹೋಮ ನಡೆಯುತ್ತಿದೆ.
*ಗೋವುಗಳ ಹೇಳತೀರದ ಪಾಡು*
ಒಂದೆಡೆ ಮತ್ತೊಂದೆಡೆ ವಾಹನಗಳಲ್ಲಿ ಸಾಗಿಸುವ ವೇಳೆ ಗೋವುಗಳ ನೋವಿನ ಪಾಡಿನ ಬಗ್ಗೆ ದಂಧೆಕೋರರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂಚಾರ ಪ್ರಾರಂಭದಿಂದ ಮುಕ್ತಾಯ ಹಂತದವರೆಗೂ ಮೇವು, ನೀರು ಕೊಡುವುದಿಲ್ಲ. ಬದಲಿಗೆ ವಾಹನದ ಇಕ್ಕಟ್ಟಿನ ಜಾಗದಲ್ಲಿ ಹೆಚ್ಚು ಗೋವುಗಳನ್ನು ಕಟ್ಟಿ ಹಾಕಲಾಗಿರುತ್ತದೆ. ಇದೇ ಗಂಟೆಗಟ್ಟಲೇ ನಿಂತುಕೊಂಡು ಬಳಿಕ ನಿತ್ರಾಣದಲ್ಲಿ ಮೂಕ ಜೀವಿಗಳು ಕುಸಿದು ಬಿದ್ದಿರುವ ದೃಶ್ಯಗಳು ಕಂಡು ಬಂದಿವೆ. ಇದನ್ನು ಗೋವುಗಳ ಸಾಗಾಣೆ ತಡೆದ ಸಂದರ್ಭದಲ್ಲಿ ಸೆರೆ ಹಿಡಿದ ವಿಡಿಯೋಗಳೇ ಹೇಳುತ್ತವೆ. ಇತ್ತೀಚೆಗೆ ಪೆರೇಸಂದ್ರ ಸಮೀಪದಲ್ಲಿ ಕ್ಯಾಂಟರ್ ವಾಹನ ಅಪಘಾತಕ್ಕೆ ತುತ್ತಾದ ಸಂದರ್ಭದಲ್ಲಿ ಒಂದರ ಮೇಲೆ ಮತ್ತೊಂದು ಬಿದ್ದು ಮೃತಪಟ್ಟಿದ್ದ ಪ್ರಕರಣವು ಕರುಳು ಹಿಂಡುವಂತಿತ್ತು.