

ನಂಜನಗೂಡು: ಸರ್ಕಾರದಿಂದ ರೈತರಿಗೆ ಸಬ್ಸಿಡಿ ರೂಪದಲ್ಲಿ ವಿತರಿಸುತ್ತಿದ್ದ ರಸಗೊಬ್ಬರವನ್ನು ಅಕ್ರಮವಾಗಿ ಶೇಖರಣೆ ಮಾಡಿದ್ದ ಗೋದಾಮಿನ ಮೇಲೆ ರೈತ ಸಂಘಟನೆ ಹಾಗೂ ಕೃಷಿ ಅಧಿಕಾರಿಗಳು ದಾಳಿ ನಡೆಸಿ 200ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದಿಂದ ಹುಲ್ಲಹಳ್ಳಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯಲ್ಲಿರುವ ಗೌಸಿಯ ರೈಸ್‌ಮಿಲ್‌ಗೆ ರೈತ ಸಂಘಟನೆ, ಕೃಷಿ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಅಕ್ರಮವಾಗಿ ಶೇಖರಣೆ ಮಾಡಿದ್ದ ಯೂರಿಯ ರಸಗೊಬ್ಬರ ಚೀಲಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಹಾಗೂ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ಅವರು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಯಿತು. ಕೇರಳ ಮೂಲದ ಮಹಮ್ಮದ್ ಪಾಸಿಲ್ ಗೌಸಿಯ ರೈಸ್‌ಮಿಲ್‌ನಲ್ಲಿ ಬಾಡಿಗೆಗೆ ಗೋದಾಮು ಪಡೆದುಕೊಂಡು ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ, ಹೆಚ್ಚಿನ ಬೆಲೆಗೆ ಬೇರೆ ಬೇರೆ ರಾಜ್ಯಗಳಿಗೆ ರವಾನೆ ಮಾಡುತ್ತಿದ್ದ ವಿಷಯ ರೈತ ಸಂಘಟನೆಗಳಿಗೆ ತಿಳಿದಿದೆ. ಕಳೆದ ಕೆಲವು ದಿನಗಳಿಂದ ಗಮನಿಸಿ ಸೋಮವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿದರು.
ವಿದ್ಯಾಸಾಗರ್ ಮಾತನಾಡಿ, ಕೇಂದ್ರ ಸರ್ಕಾರ ಯೂರಿಯಾ ರಸಗೊಬ್ಬರವನ್ನು 50 ಕೆಜಿ ತೂಕದ ಚೀಲಕ್ಕೆ 1477 ರೂ. ನಿಗದಿಪಡಿಸಲಾಗಿದೆ. ಸಬ್ಸಿಡಿ ರೂಪದಲ್ಲಿ ರೈತರಿಗೆ 266 ರೂ.ಗಳಿಗೆ ವಿತರಿಸುತ್ತಿದ್ದಾರೆ. ಆದರೆ ಕೆಲ ವ್ಯಕ್ತಿಗಳು ರಸಗೊಬ್ಬರವನ್ನು ಅಕ್ರಮವಾಗಿ ಶೇಖರಣೆ ಮಾಡಿ, ಕೊರತೆ ಉಂಟು ಮಾಡುತ್ತಿದ್ದಾರೆ. ಇದರಿಂದ ರೈತರು ಮಾರಾಟ ಕೇಂದ್ರಗಳ ಬಳಿ ವಾರಗಟ್ಟಲೆ ಅಲೆದರೂ ಗೊಬ್ಬರ ಸಿಗುತ್ತಿಲ್ಲ. ರೈತರಿಗೆ ಸೇರಬೇಕಾಗಿದ್ದ ರಸಗೊಬ್ಬರ ಬೇರೆ ರಾಜ್ಯಕ್ಕೆ ದಿನನಿತ್ಯ ಸಾಗಾಟವಾಗುತ್ತಿದೆ. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲೂ ಅಕ್ರಮ ದಾಸ್ತಾನ ಕೇಂದ್ರಗಳು ಇದ್ದು, ಸಂಬಂಧಪಟ್ಟ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿರು.
ಡಿವೈಎಸ್‌ಪಿ ರಘು, ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ಕೃಷಿ ಅಧಿಕಾರಿ ರವಿ, ಕಂದಾಯ ಇಲಾಖೆ ಶಿವಪ್ರಸಾದ್, ಸತೀಶ್ ರಾವ್, ಇಮ್ಮಾವು ರಘು, ಮಹದೇವ ನಾಯಕ, ತಿಮ್ಮನಾಯಕ ಇತರರು ಇದ್ದರು.