

ಬೋರಗಾಂವ: ಕಳೆದ ಮೂರ್ನಾಲ್ಕು ತಿಂಗಳಿಂದ ಪಟ್ಟಣದ ವಡಗೇರಿ ವ್ಯಾಪ್ತಿಯ ಸರ್ವೇ ನಂ 184/ಅ, 197 ಎಕರೆ ಗಾಯರಾಣ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಮುಖಂಡ ಉತ್ತಮ ಪಾಟೀಲರ ನೇತೃತ್ವದಲ್ಲಿ ಬೋರಗಾಂವ ಪಟ್ಟಣ ಪಂಚಾಯಿತಿ ಸದಸ್ಯರು ಗುರುವಾರ ಅಲ್ಲಿಗೆ ತೆರಳಿ ಮೂರು ಟಿಪ್ಪರ್ ಹಾಗೂ ಒಂದು ಜೆಸಿಬಿ ವಾಹನವನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
ಗಡಿಭಾಗ ಬೋರಗಾಂವ ಪಟ್ಟಣದ ಸರ್ವೇ ನಂ. 184/ಅ ಸರ್ಕಾರಿ ಜಮೀನಿನಲ್ಲಿ ಕೈಗಾರಿಕೆ ಕೇಂದ್ರ ಸ್ಥಾಪನೆಗೆ 197 ಎಕರೆ ಸರ್ಕಾರಿ ಭೂಮಿ ಕಾಯ್ದಿರಿಸಿದೆ. ಆದರೆ, ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ ಅಕ್ರಮ ಗಣಿಗಾರಿಕೆಯವರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಮುರುಮ್ (ಗರಸು) ಸಾಗಿಸುತ್ತಿದ್ದರು. ಈ ಬಗ್ಗೆ ಕೆಲ ಸ್ಥಳೀಯರು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಪಪಂ ಸದಸ್ಯರು ಅಕ್ರಮ ಗಣಿಗಾರಿಕೆಯ ಪ್ರದೇಶಕ್ಕೆ ತೆರಳಿ ಕಲ್ಲು ಗಣಿಗಾರಿಕೆ ಬಂದ್ ಮಾಡಿಸಿ, ಬಳಿಕ ನಿಪ್ಪಾಣಿ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ಸಿಪಿಐ ಆರ್.ಆರ್. ಪಾಟೀಲ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಎಎಸ್‌ಐ ಎಸ್.ಬಿ. ವಾಘಮೋರೆ, ಎಸ್.ಎಸ್. ಪಾಟೀಲ ಮತ್ತು ಸಿಬ್ಬಂದಿ 3 ಟಿಪ್ಪರ್, 1 ಜೆಸಿಬಿ ವಶಕ್ಕೆ ಪಡೆದರು. ಚಾಲಕ ಯಲ್ಲಪ್ಪ ಶೇಂಡುರೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮಲೆಕ್ಕಾಧಿಕಾರಿ ಉಮೇಶ ಕೋಳಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಉಳಿದ ಚಾಲಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಸಂದರ್ಭದಲ್ಲಿ ಬೋರಾಗಾಂವ ಪಟ್ಟಣ ಪಂಚಾಯಿತಿ ಸದಸ್ಯ ಅಭಯಕುಮಾರ ಮಗದುಮ್ಮ, ಪ್ರದೀಪ ಮಾಳಿ, ಸಂಗಪ್ಪ ಐದಮಾಳೆ, ಬಿ.ಕೆ.
ಮಹಾಜನ ಅಣ್ಣಪ್ಪ ಢೋಂಗೆ, ಅಶೋಕ ನೇಜೆ, ಶಿಶಿರ ಸಾತಪೂತೆ, ನಾಗರಾಜ ಭಂಜತ್ರಿ, ಸದಾಶಿವ ಘೋಡಸೆ, ಎಸ್.ಬಿ. ಗಲಗಲಿ, ಮಹಾದೇವ ಗಡ್ಡೆ, ಶಿವಾಜಿ ಢೋಂಗೆ, ವಿಜಯ ಚೌಗುಲಾ, ನಿಲೇಶ ಉರಣಕರ ಇತರರು ಇದ್ದರು.
ಸರ್ವೇ ನಂ. 184ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಅವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪಪಂ ಸದಸ್ಯರು ಸೇರಿ ಗಣಿಗಾರಿಕೆ ಸ್ಥಗಿತ ಮಾಡಿಸಿದ್ದೇವೆ. ಪಟ್ಟಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. | ಉತ್ತಮ ಪಾಟೀಲ ಸ್ಥಳೀಯ ಮುಖಂಡ