

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ, ಹಾವೇರಿ, ಬ್ಯಾಡಗಿ ಹಾಗೂ ಹಿರೇಕೆರೂರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.
ರಾಣೆಬೆನ್ನೂರ ತಾಲೂಕಿನ ಕಜ್ಜರಿ ಗ್ರಾಮ ವ್ಯಾಪ್ತಿಯ ಹುಲ್ಲುಗಾವಲು ಪ್ರದೇಶದಲ್ಲಿ ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಇದನ್ನು ಕಂಡೂ ಕಾಣದಂತಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ, ಹುಲ್ಲುಗಾವಲು ಹಾಗೂ ರೈತರ ಜಮೀನುಗಳು ಸಹ ಅಕ್ರಮ ಕಲ್ಲುಗಣಿಗಾರಿಕೆಗೆ ನಲುಗಿ ಹೋಗಿವೆ. ರಾಣೆಬೆನ್ನೂರ ತಾಲೂಕಿನ ಕಜ್ಜರಿ, ಕಾಕೋಳ, ಹುನಸಿಕಟ್ಟೆ, ಹುಲಿಹಳ್ಳಿ, ದೇವರಗುಡ್ಡ, ಕರಿಯಾಲ, ಬ್ಯಾಡಗಿ ತಾಲೂಕಿನ ಛತ್ರ, ಹಾವೇರಿ ತಾಲೂಕಿನ ನೆಲೋಗಲ್ಲ, ಹಿರೇಕೆರೂರ ತಾಲೂಕಿನ ಕೆಲ ಗ್ರಾಮಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದೆ.
ಗಣಿಗಾರಿಕೆ ಮಾಡುವವರು ತಮಗೆ ನೀಡಿದ ಜಾಗದ ಸುತ್ತಲೂ ತಡೆಗೋಡೆ ನಿರ್ವಿುಸಿಕೊಳ್ಳಬೇಕು. ಮದ್ದು, ಡೈನಾಮೈಟ್ ಬಳಬಾರದು. ಯಂತ್ರದ ಸಹಾಯದಿಂದ ಕಲ್ಲು ತೆಗೆಯಬೇಕು. ಸರ್ಕಾರ ನಿಗದಿ ಪಡಿಸಿದ ಆಳಕ್ಕಿಂತ ಹೆಚ್ಚಿಗೆ ಗುಂಡಿ ತೆಗೆಯಬಾರದು. ಧೂಳು ಏಳದಂತೆ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ತೊಂದರೆಯಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಆದರೆ, ಜಿಲ್ಲೆಯ ಗಣಿಗಾರಿಕೆ ಕ್ಷೇತ್ರಗಳಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೆಲವೆಡೆ ಗುತ್ತಿಗೆದಾರರಿಗೆ ನೀಡಿದ ಪ್ರದೇಶಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಅನೇಕ ಹೋರಾಟಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ.
ಸಾರ್ವಜನಿಕರು ದೂರು ನೀಡಿದಾಗ ಅಧಿಕಾರಿಗಳು ಹೋಗಿ ಒಂದೆರಡು ದಿನ ಗಣಿಗಾರಿಕೆ ಬಂದ್ ಮಾಡಿಸುತ್ತಾರೆ. ಆ ಬಳಿಕ ಮತ್ತೆ ಶುರು ಮಾಡುತ್ತಾರೆ. ಇದರಲ್ಲಿ ಪ್ರಭಾವಿಗಳ ಕೈವಾಡ ಇರುವುದರಿಂದ ಯಾವ ಕಾರಣಕ್ಕೂ ಅಕ್ರಮ ತಡೆಯಲು ಆಗುತ್ತಿಲ್ಲ ಎಂಬ ಆರೋಪವೂ ಇದೆ.
ರಾಣೆಬೆನ್ನೂರ ತಾಲೂಕಿನ ಕಜ್ಜರಿ ಗ್ರಾಮದಲ್ಲಿ 300ಕ್ಕೂ ಅಧಿಕ ಎಕರೆ ಹುಲ್ಲುಗಾವಲು ಪ್ರದೇಶವಿದೆ. ಇಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ 15 ಗುತ್ತಿಗೆದಾರರಿಗೆ ಒಟ್ಟು 26.40 ಎಕರೆ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಪರವಾನಗಿ ನೀಡಲಾಗಿದೆ. ಗಣಿಗಾರಿಕೆಗಾಗಿ ಗುಂಡಿ ತೋಡಲು ಸಿಡಿಮದ್ದು ಬಳಸುವ ಕಾರಣ ಈ ಪ್ರದೇಶದ ಮೇಲೆ ಅವಲಂಬಿತವಾಗಿದ್ದ ಕುರಿ, ಜಾನುವಾರು ಮೇಯಿಸುವವರು ಇಲ್ಲಿ ಕಾಲಿಡಲು ಭಯಪಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದರೂ ಯಾವ ಅಧಿಕಾರಿಗಳೂ ತಡೆಯಲಿಲ್ಲ ಎಂದು ಕಜ್ಜರಿ ಗ್ರಾಮದ ರೈತ ನಾಗಪ್ಪ ಮೋಟೆಬೆನ್ನೂರ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
ಶಿವಮೊಗ್ಗದಲ್ಲಿ ನಡೆದ ದುರಂತದ ನಂತರ ಎಲ್ಲ ಜಿಲ್ಲೆಯಲ್ಲಿಗಳಲ್ಲಿಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ, ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಏನೇನು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿ ಕೇಳಲು ಮುಂದಾದರೆ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಅಧಿಕಾರಿ ಪುಷ್ಪಾವತಿ ಅವರ ದೂರವಾಣಿ ಸಂಖ್ಯೆ ಸ್ವಿಚ್ಆಫ್ ಆಗಿತ್ತು.