ಕುದುರಿದ ಅಕ್ರಮ ಮಣ್ಣು ದಂಧೆ

soil new
Published on

ಉಳ್ಳಾಲ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಅದರೆ ಇಂತಹ ಸಂದರ್ಭವನ್ನೂ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣಿನ ದಂಧೆಯಲ್ಲಿ ನಿರತರಾಗಿರುವ ಪ್ರಕರಣ ಇರಾದಲ್ಲಿ ಬೆಳಕಿಗೆ ಬಂದಿದೆ.

ಇರಾ ಗ್ರಾಮದ ಸರ್ವೇ ನಂಬರ್ 238/1ಬಿ2ಎ1ಪಿ1ರಲ್ಲಿ 11.12 ಎಕ್ರೆ, ಸರ್ವೇ ನಂಬರ್ 241/1ಎಪಿ1ರಲ್ಲಿ 6.53 ಎಕರೆ ಸರ್ಕಾರಿ ಜಮೀನು ಇದ್ದು ಪಂಚಾಯಿತಿ ನಿರ್ಣಯದ ಮೇರೆಗೆ 2015ರಲ್ಲೇ ಮಂಗಳೂರಿನ ಸಹಾಯಕ ಆಯುಕ್ತರು ನಿವೇಶನ ರಹಿತರಿಗಾಗಿ ಮೀಸಲಿಟ್ಟು ಆದೇಶ ಹೊರಡಿಸಿದ್ದರು. ಅಲ್ಲದೆ ಈ ಜಮೀನಿನಲ್ಲಿ ಸರ್ಕಾರದ ಉದ್ದೇಶ ಹೊರತುಪಡಿಸಿ ಇನ್ನಿತರ ಚಟುವಟಿಕೆ ನಿಷೇಧಿಸಲಾಗಿತ್ತು. ಆದರೆ ಕೆಲವು ದಿನಗಳಿಂದ ಮೀಸಲು ಜಮೀನಿನಲ್ಲಿ ಅಕ್ರಮ ಚಟುವಟಿಕೆ ಆರಂಭಗೊಂಡಿದ್ದು, ಜಮೀನು ಸಮತಟ್ಟುಗೊಳಿಸುವ ನೆಪದಲ್ಲಿ ಮಣ್ಣು ಮಾರಾಟ ಪ್ರಕ್ರಿಯೆ ಆರಂಭಗೊಂಡಿದೆ.

ಸಿಮೆಂಟ್ ಮಿಶ್ರಣಕ್ಕೆ ಬಳಕೆ:

ಈ ಜಮೀನು ಕೆಂಪು ಕಲ್ಲಿನಿಂದ ಆವೃತ್ತವಾಗಿದ್ದು ಮಣ್ಣು, ಸಿಮೆಂಟಿಗೆ ಮಿಶ್ರಣ ಮಾಡಲು ಬಳಕೆಯಾಗುತ್ತದೆ. ಈಗಾಗಲೇ ಕಂಬಳಪದವು, ಮುಡಿಪು ಪ್ರದೇಶದಲ್ಲಿ ಇಂತಹ ಮಣ್ಣು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸಾಗಾಟ ಮಾಡುವ ಬಗ್ಗೆ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅದೇ ರೀತಿಯ ಪ್ರಕ್ರಿಯೆ ಇರಾದಲ್ಲೂ ಆರಂಭಗೊಂಡಿದೆ. ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

ಜಿಲ್ಲಾಧಿಕಾರಿಗೆ ದೂರು ನಿವೇಶನ ರಹಿತರ ಮೀಸಲು ಜಮೀನಿನ ಮಣ್ಣು ತೆಗೆದು ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಮೀನು ಮೀಸಲಿಡುವ ಬಗ್ಗೆ, ಬಳಿಕ ಅಕ್ರಮವಾಗಿ ಮಾರಾಟ ಮಾಡಲು ಕೆಲವು ರಾಜಕೀಯ ವ್ಯಕ್ತಿಗಳು ಮುಂದಾದಾಗಲೂ ಅಧಿಕಾರಿಗಳಿಗೆ ದೂರು ನೀಡುವ ಮೂಲಕ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರ ಇಬ್ರಾಹಿಂ ಇರಾ ಮಂಗಳವಾರ ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಜಮೀನು ನಿವೇಶನ ರಹಿತರಿಗಾಗಿ ಮೀಸಲಿಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಬಳಿಕವೂ ಅಕ್ರಮವಾಗಿ ಮಾರಾಟ ಪ್ರಕ್ರಿಯೆ ನಡೆದಿತ್ತು. ಇದೀಗ ಮತ್ತೆ ಮಣ್ಣು ಮಾರಾಟ ದಂಧೆ ಆರಂಭಗೊಂಡಿದ್ದು ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಬ್ರಾಹಿಂ ಇರಾ, ಸಾಮಾಜಿಕ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net