

ಹಾನಗಲ್ಲ: ಪಟ್ಟಣದ ಹೊರಭಾಗದಲ್ಲಿ ಅಧಿಕೃತ ಪರವಾನಗಿ ಹೊಂದಿರುವ ಜಾನುವಾರುಗಳ ವಧಾಲಯವಿದೆ. ಆದರೂ, ಜಾನುವಾರುಗಳನ್ನು ಎಲ್ಲೆಂದರಲ್ಲಿ ರಾತ್ರೋರಾತ್ರಿ ಕಡಿದು ಗೋವಾ, ಕಾರವಾರ, ಮುಂಡಗೋಡ ಸೇರಿದಂತೆ ಬೇರೆಡೆ ಮಾಂಸ ಸಾಗಿಸುವ ಜಾಲ ಪಟ್ಟಣದಲ್ಲಿ ಕಾರ್ಯಪ್ರವೃತ್ತವಾಗಿದೆ.
ಪಟ್ಟಣದ ಬೈಚವಳ್ಳಿ ರಸ್ತೆಯಲ್ಲಿ ಪರವಾನಗಿ ಹೊಂದಿರುವ ಅಧಿಕೃತ ಹಾಗೂ ಸುಸಜ್ಜಿತ ವಧಾಲಯ ಆರಂಭಿಸಲಾಗಿದೆ. ಆದರೆ, ಅಲ್ಲಿ ಜಾನುವಾರುಗಳನ್ನು ವಧಿಸಲು ಜಾನುವಾರು ಖರೀದಿಸಿದ ಬಗ್ಗೆ ರಸೀದಿ ಹೊಂದಿರಬೇಕು. ಇದಕ್ಕೆ ಹಣ ಪಾವತಿಸಬೇಕು. ವಧೆ ನಂತರ ಜಾನುವಾರುಗಳ ಚರ್ಮ, ಮೂಳೆಗಳು, ಕೊಂಬುಗಳನ್ನು ಅಲ್ಲಿಯೇ ಬಿಡಬೇಕಾಗುತ್ತದೆ. ಸಿಸಿ ಕ್ಯಾಮರಾದಲ್ಲಿ ಜಾನುವಾರುಗಳ ಚಿತ್ರ ದಾಖಲಾಗುತ್ತದೆ. ಹೀಗಾಗಿ ಅಧಿಕೃತ ವಧಾಲಯಕ್ಕೆ ತೆರಳದೇ, ಗುಪ್ತ ಜಾಗದಲ್ಲಿ ವಧೆ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬೇರೆಡೆ ಸಾಗಿಸುವ ದಂಧೆ ಜೋರಾಗಿದೆ.
ಪಟ್ಟಣದ ರಾಜೀವ ನಗರ, ಕಂಬಳಗೇರಿ, ದರ್ಗಾ ಪ್ರದೇಶ, ಇಂದಿರಾನಗರ ಸೇರಿದಂತೆ ವಿವಿಧೆಡೆ ಜಾನುವಾರುಗಳನ್ನು ಅನಧಿಕೃತವಾಗಿ ವಧೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಪಟ್ಟಣ ಸೇರಿದಂತೆ ಹೊರಭಾಗದ ಹೊಲಗಳು, ಫಾಮರ್್ಹೌಸ್ಗಳಲ್ಲಿ ಅನಧಿಕೃತ ಕಸಾಯಿಖಾನೆಗಳು ಚಾಲ್ತಿಯಲ್ಲಿವೆ. ನಿತ್ಯವೂ ನೂರಾರು ಆಕಳುಗಳನ್ನು ವಧಿಸಲಾಗುತ್ತಿದೆ. ಬಿಡಾಡಿ ದನಗಳು ಹಾಗೂ ಹಳ್ಳಿಗಳಲ್ಲಿ ರಾತ್ರಿ ಸಮಯದಲ್ಲಿ ಕಳವು ಮಾಡಿ ತಂದ ಜಾನುವಾರುಗಳನ್ನು ಯಾರಿಗೂ ಗೊತ್ತಾಗದಂತೆ ಕಡಿದು ಮಾಂಸ ಸಾಗಿಸಲಾಗುತ್ತಿದೆ. ಸ್ಥಳೀಯವಾಗಿ ಪುರಸಭೆಯಿಂದ ಮಾಂಸ ಮಾರಾಟಕ್ಕಾಗಿ ಮಳಿಗೆ ನೀಡಿರುವುದು ಅನಧಿಕೃತ ಮಾರಾಟಗಾರರಿಗೆ ಪರೋಕ್ಷವಾಗಿ ನೆರವಾದಂತಿದೆ.
ಗೋ-ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಪುರಸಭೆ ದನದ ಮಾಂಸ ಮಾರಾಟಕ್ಕೆ ಮಳಿಗೆ ನೀಡಿರುವುದು ಸಾರ್ವಜನಿಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಜಾನುವಾರು ವಧೆಯ ನಂತರ ತ್ಯಾಜ್ಯವನ್ನು ಪಟ್ಟಣದ ಹೊರವಲಯದಲ್ಲಿ ರಸ್ತೆಗಳ ಬದಿಯ ಪೊದೆಗಳಲ್ಲಿ ಎಸೆಯಲಾಗುತ್ತಿದೆ. ಇದರಿಂದ ಹೊರಸೂಸುವ ದುರ್ವಾಸನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಅಕ್ರಮ ದಂಧೆ ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಮುಂದಾಗದಿರುವುದು ಹಿಂದುಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. 1964ರ ಗೋ ಹತ್ಯಾ ನಿಷೇಧ ಕಾನೂನಿಗೆ 2021ರಲ್ಲಿ ತಿದ್ದುಪಡಿ ಮಾಡಿ ಜಾನುವಾರುಗಳ ವಧೆ, ಮಾಂಸ ಮಾರಾಟ ಮಾಡಲು ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇದಕ್ಕೆ ತಪ್ಪಿದರೆ ಜಾಮೀನು ರಹಿತ ಬಂಧನ, ಮೂರರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಶಹರದ ಹೊರ ವಲಯದಲ್ಲಿ ದನಗಳನ್ನು ಅನಧಿಕೃತವಾಗಿ ವಧೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಕೃತ್ಯವನ್ನು ಪತ್ತೆ ಹಚ್ಚಿ ಕೂಡಲೇ ಸ್ಥಗಿತಗೊಳಿಸಲು ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೇ ದರ್ಗಾ ಬಡಾವಣೆಯಲ್ಲಿ ನಡೆಯುತ್ತಿದ್ದ ಅಕ್ರಮ ಘಟಕ ಪತ್ತೆ ಹಚ್ಚಿ, ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಇನ್ನಷ್ಟು ಕಡೆಗಳಲ್ಲಿ ಇಂಥ ಅನಧಿಕೃತ ವಧಾಲಯಗಳು ಇರುವ ಬಗ್ಗೆ ದೂರು ಬಂದಿವೆ. ಶೀಘ್ರದಲ್ಲಿ ಇವೆಲ್ಲವನ್ನೂ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು. | ರವಿಕುಮಾರ ಕೊರವರ, ತಹಸೀಲ್ದಾರ್ ಹಾನಗಲ್ಲ ಪಟ್ಟಣದ ದರ್ಗಾ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ, ಘಟಕದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅದೇ ಸಂದರ್ಭದಲ್ಲಿ ಸ್ಥಳದಲ್ಲಿ ಸಿಕ್ಕಿದ್ದ 11 ಜಾನುವಾರುಗಳನ್ನು ರಕ್ಷಿಸಿ, ಬ್ಯಾಡಗಿಯ ಗೋಶಾಲೆಗೆ ತಲುಪಿಸಿದ್ದೇವೆ. ಇನ್ನೂ ನಾಲ್ಕಾರು ಕಡೆಗಳಲ್ಲಿ ಅಕ್ರಮ ಘಟಕಗಳಿರುವ ಮಾಹಿತಿ ದೊರಕಿದೆ. ಕೂಡಲೇ ಪುರಸಭೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಲಾಗುವುದು. | ಎಸ್.ಆರ್. ಶ್ರೀಧರ, ಸಿಪಿಐ ಹಾನಗಲ್ಲ ತಾಲೂಕಿನಲ್ಲಿ ರೈತರ ಜಾನುವಾರುಗಳ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ, ಅವುಗಳ ಪತ್ತೆಯಾಗುತ್ತಿಲ್ಲ. ಜಾನುವಾರುಗಳ ಅಕ್ರಮ ಸಾಗಾಟ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಮಾಂಸಕ್ಕೆ ಬಳಸುತ್ತಿರಬೇಕೆಂಬ ಸಂಶಯವೂ ನಮ್ಮ ರೈತರದ್ದಾಗಿದೆ. ಹಾನಗಲ್ಲಿನಲ್ಲಿ ಕದ್ದ ದನಗಳನ್ನು ವಧಿಸಿ ಮಾಂಸ ಮಾರಾಟ ಮಾಡುತ್ತಿರುವುದಾಗಿ ದೂರುಗಳಿವೆ. ದನದ ಮಾಂಸ ಮಾರಾಟಕ್ಕೆ ಪುರಸಭೆ ಮಳಿಗೆಗಳನ್ನು ನೀಡಿರುವುದು ಇದಕ್ಕೆ ಪುಷ್ಟಿ ನೀಡುತ್ತಿವೆ. ಈ ಮಳಿಗೆಗಳಿಗೆ ದನದ ಮಾಂಸ ಯಾವ ಕಸಾಯಿಖಾನೆಯಿಂದ ಬರುತ್ತದೆ ಎಂಬುದನ್ನು ಪರಿಶೀಲಿಸಿದರೆ ಎಲ್ಲ ಅಕ್ರಮ ವ್ಯವಹಾರವೂ ಹೊರಬರುತ್ತದೆ. | ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ ಹಾನಗಲ್ಲ