

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿಯಲ್ಲಿ ಗ್ರಾಮಸಭೆ ಜರುಗಿತು.
ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಜನತಾ ಬಡಾವಣೆಯ ಜನರು ಕಸ ಎಸೆಯುತ್ತಿದ್ದಾರೆ. ಕೆಲವರು ಅಕ್ರಮವಾಗಿ ಅಂಗಡಿ ಹಾಕಿಕೊಂಡಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಅಂಗಡಿಗಳನ್ನು ತೆರವುಗೊಳಿಸಿ ಕಸ ಎಸೆಯದಂತೆ ಮಾಡಬೇಕು ಎಂದರು.
ವೈದ್ಯಾಧಿಕಾರಿ ಡಾ.ಚಂದ್ರಕಾಂತ ಧೂಳಶೆಟ್ಟಿ ಇದಕ್ಕೆ ಪ್ರತಿಕ್ರಿಯಿಸಿ, ಅಂಗಡಿ ತೆರವುಗೊಳಿಸುವಂತೆ ಹಲವು ಬಾರಿ ಸೂಚಿಸಲಾಗಿದೆ. ಇದು ಪಿಡಬ್ಲ್ಯುಡಿ ಜಾಗ ಎಂದು ನಮಗೆ ಆವಾಜ ಹಾಕುತ್ತಿದ್ದರೆ. ಕಸ ಎಸೆಯದಂತೆ ತಾಕೀತು ಮಾಡಿದರೂ ಮತ್ತೆ ಕಸ ಎಸೆದು ಹೋಗುತ್ತಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಗ್ರಾಪಂನಿಂದ ಪೊಲೀಸರಿಗೆ ದೂರು ನೀಡಿದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೆಸ್ಕಾಂ ಶಾಖಾಧಿಕಾರಿ ಸಿ.ಕೆ.ಹಿರೇಮಠ, ಕೆವಿಜಿ ಬ್ಯಾಂಕ್ ಅಧಿಕಾರಿ ಸಾಗರ ಜಗತಾಪ, ಸದಸ್ಯರಾದ ಅನಿಲ ಮುಳಿಕ, ಬಾಳಾಸಾಹೇಬ ಪೂಜಾರಿ, ಮಲ್ಲಿಕಾರ್ಜುನ ಪರಾಂಡೆ, ಶ್ರೀಶೈಲ ದೊಡಮನಿ, ಮಹಾದೇವ ಚವ್ಹಾಣ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಲೆಕ್ಕಸಹಾಯಕಿ ದಾನಮ್ಮ ಬಾಗಿ ಇತರರಿದ್ದರು.