ಕಾನೂನುಬಾಹಿರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ವಿರೋಧ

udp-19-dss
Published on

ಉಡುಪಿ: ಜಿಲ್ಲೆಯಲ್ಲಿ ಬೋವಿ ಮತ್ತು ಪರಿವಾರ ನ್ಯಾಕ್ ಜಾತಿಗಳಿಗೆ ಕಾನೂನುಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗಿಯ ಸಂಚಾಲಕ ರಾಜಶೇಖರ ಕೋಟೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆಯಲ್ಲಿರುವ ಬೋವಿ ಮತ್ತು ಪರಿವಾರ ನ್ಯಾಕ್ ಜಾತಿಗಳು ಪ್ರವರ್ಗ-1 ರಲ್ಲಿ ಬರುವ ಇತರ ಹಿಂದುಳಿದ ಜಾತಿಗಳಾಗಿವೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಶಿಫಾರಸ್ಸಿನಂತೆ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದೆ ಏಕಾಏಕಿ ಈ ಜಾತಿಗಳಿಗೆ, ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಹೀಗಾಗಿ ಜಿಲ್ಲಾಡಳಿತದ ಈ ನಡೆಯಿಂದ ಜಿಲ್ಲೆಯ ನೈಜ ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ್ ಗಿಳಿಯಾರ್ ಮಾತನಾಡಿ, ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಈ ಜಾತಿಗಳಿಗೆ ಪರಿಶಿಷ್ಟರ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿಲ್ಲ. ಈ ಜಾತಿಗಳ ಕುಲಶಾಸ್ತ್ರ ಅಧ್ಯಯನ ನಡೆಸಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದಿಂದ ಶಿಫಾರಸ್ಸಾದ ಬಳಿಕ ಸಂಘಟ ಸಭೆಯಲ್ಲಿ ಅನುಮೋದನೆ ಪಡೆದು, ಕೇಂದ್ರ ಸರ್ಕಾರ ಗಜೆಟ್ ನೋಟಿಫಿಕೇಶನ್ ಮಾಡಿದ ನಂತರ ಈ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ, ಪ್ರಮಾಣ ಪತ್ರಗಳನ್ನು ನೀಡಬೇಕಾಗಿತ್ತು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಜಿಲ್ಲಾಡಳಿತ ಈ ಕಾನೂನುಬಾಹಿರ ಕ್ರಮ ಜರುಗಿಸುತ್ತಿದೆ. 200ಕ್ಕೂ ಅಧಿಕ ಪ್ರಮಾಣ ಪತ್ರ ವಿತರಿಸಿದೆ. ಹೀಗಾಗಿ ನಕಲಿ ಜಾತಿ ಪ್ರಮಾಣಪತ್ರ ವಿತಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂಘಟನೆ ಕಾನೂನು ಕ್ರಮ ಜರುಗಿಸಲಿದೆ ಎಂದರು ಹೇಳಿದರು.

ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಮಾತನಾಡಿ, ಜಿಲ್ಲಾ ಅಂಬೇಡ್ಕರ್ ಭವನವನ್ನು 15 ಕೋಟಿ ರೂ. ವೆಚ್ಚದಲ್ಲಿ ಮತ್ತು ಕುಂದಾಪುರ ತಾಲೂಕು ಅಂಬೇಡ್ಕರ್ ಭವನವನ್ನು 5 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ದಸಂಸ ಮುಖಂಡರಾದ ಸಂಜೀವ ಬಳ್ಕೂರು, ವಾಸುದೇವ ಮುದೂರು, ಸುರೇಶ್ ಬಾರಕೂರು, ರಾಜು ಬೆಟ್ಟಿನ ಮನೆ, ಎನ್ .ಎ . ನೇಜಾರು. ನಾಗರಾಜ ಉಪ್ಪುಂದ, ನಾರಾಯಣ್ ಗುಂಡ್ಮಿ, ಶಂಕರ ಅಜೆಕಾರು, ಸುರೇಶ ಹಕ್ಲಾಡಿ, ರಾಜೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net