

ಮಂಗಳೂರು: ಮರವೂರು ರೈಲ್ವೇ ಬ್ರಿಡ್ಜ್ ಸಮೀಪ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ 150 ಮೆಟ್ರಿಕ್ ಟನ್ ಮರಳು, ಡೋಜರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು-ಕೇರಳ-ಮಂಗಳೂರಿನಿಂದ ಮರವೂರು ರೈಲ್ವೆ ಸೇತುವೆ ಮೂಲಕ ಕೊಂಕಣ ರೈಲು ಮಾರ್ಗದಲ್ಲಿ ಪ್ರತಿನಿತ್ಯ 50 ರೈಲುಗಳಲ್ಲಿ 40 ಸಾವಿರದಿಂದ 50 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ರೈಲ್ವೇ ಟ್ರ್ಯಾಕ್‌ನ ಕೆಳಭಾಗದಲ್ಲೇ ನಿಯಮ ಮೀರಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿತ್ತು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮ ಪ್ರಕಾರ ಸೇತುವೆಯ ಎರಡೂ ಭಾಗದ ತಲಾ 100 ಮೀ. ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ. ಆದರೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಎಂ.ಸಿ. ಕೃಷ್ಣವೇಣಿ ಮಾರ್ಗದರ್ಶನದಂತೆ ಗಣಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಡೋಜರ್, 150ಮೆಟ್ರಿಕ್ ಟನ್ ಮರಳು ಮುಟ್ಟುಗೋಲು ಹಾಕಲಾಗಿದೆ.