ತಿಮ್ಮರಾಯನಗೌಡನ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ, ಅಹನ್ಯ ಗ್ರಾಮಸ್ಥರ ಆರೋಪ

11 LKR NEWS 3
Published on

ಲಕ್ಕೂರು: ಮಾಲೂರು ತಾಲೂಕಿನ ಗಡಿಭಾಗದ ಡಿ.ಎನ್.ದೊಡ್ಡಿ ಗ್ರಾಪಂ ವ್ಯಾಪ್ತಿಯ ಅಹನ್ಯ ಗ್ರಾಮದ ಕೆರೆಯಲ್ಲಿ ಫಲವತ್ತಾದ ಮಣ್ಣನ್ನು ತೆಗೆದು ಕೇರಳ ಹಾಗೂ ತಮಿಳುನಾಡಿಗೆ ಟಿಪ್ಪರ್ ಲಾರಿಗಳ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ತಿಮ್ಮರಾಯನಗೌಡನ ಕೆರೆಯಲ್ಲಿ ಈ ಹಿಂದೆ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿದ್ದ ದಂಧೆಗೆ ಅಧಿಕಾರಿ ವರ್ಗ ಕಡಿವಾಣ ಹಾಕಿತ್ತು. ಆದರೆ, ಮತ್ತೆ ಈಗ ದಂಧೆ ಪ್ರಾರಂಭವಾಗಿದ್ದು, ಹಲವು ದಿನಗಳಿಂದ ನಿತ್ಯ 20ಕ್ಕೂ ಹೆಚ್ಚು ವಾಹನಗಳ ಮೂಲಕ ಮಣ್ಣು ಸಾಗಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಗಡಿ ಭಾಗದಲ್ಲಿರುವುದರಿಂದ ಕೆರೆ ಮಣ್ಣನ್ನು ಟಿಪ್ಪರ್ ಮೂಲಕ ರಾಜಾರೋಷವಾಗಿ ನೆರೆರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಮಣ್ಣು ತೆಗೆಯದಂತೆ ಗುತ್ತಿಗೆದಾರರಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ.

ಜಿಪಂ ವ್ಯಾಪ್ತಿಗೆ ಒಳಪಡುವ 40 ಹೆಕ್ಟೇರ್​ನಲ್ಲಿ ವಿಸ್ತರಿಸಿರುವ ಕೆರೆಯಲ್ಲಿ ಮಣ್ಣು ತೆಗೆಯಲು ಅನುಮತಿ ನೀಡುವ ಮೊದಲು ಗ್ರಾಪಂನಲ್ಲಿ ಅನುಮೋದನೆಗೊಳ್ಳಬೇಕು. ಒಂದು ಟನ್​ಗೆ ಕನಿಷ್ಠ 100 ರೂ. ಪಾವತಿಸಿ ಗ್ರಾಪಂ ಆದೇಶವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ನೀಡಿ ಅವರಿಂದ ಅನುಮತಿ ಪಡೆದು ಮಣ್ಣು ಸಾಗಿಸಬೇಕು. ಆದರೆ ಯಾವ ಇಲಾಖೆಯೂ ಅನುಮತಿ ಪಡೆಯದೆ ಗ್ರಾಪಂ ಇಂಜಿನಿಯರ್ ನೀಡಿರುವ ಅನುಮತಿ ಮೇರೆಗೆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಸಿಗಳ ನಾಶ: ಸಾಮಾಜಿಕ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ 2019-20ನೇ ಸಾಲಿನಲ್ಲಿ ಕೆರೆಯಲ್ಲಿ ಸಸಿ ನೆಟ್ಟು ಪೋಷಣೆ ಮಾಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಸಸಿಗಳು ಬೆಳವಣಿಗೆ ಹಂತದಲ್ಲಿದ್ದವು. ಆದರೆ ಮಣ್ಣು ತೆಗೆಯುವ ಉದ್ದೇಶದಿಂದ ಸಸಿಗಳನ್ನು ನಾಶಪಡಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೆರೆಗಳ ಮಣ್ಣು ರೈತರಿಗೆ ಉಪಯುಕ್ತವಾಗಿದೆ. ಮಣ್ಣನ್ನು ಸಮತಟ್ಟಾಗಿ ತೆಗೆಯಬೇಕು. ಆದರೆ ಇಷ್ಟ ಬಂದಂತೆ ಆಳದಿಂದ ತೆಗೆಯುತ್ತಿರುವುದರಿಂದ ಫಲವತ್ತತೆ ನಾಶವಾಗುತ್ತಿದೆ. ಅಲ್ಲದೆ, ಅಂತರ್ಜಲಮಟ್ಟ ಕುಸಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. | ಡಿ.ವಿ.ಪಾಲಾಕ್ಷಬಾಬು, ಅಧ್ಯಕ್ಷ, ತಾಲೂಕು ಕೆರೆ ಬಳಕೆದಾರರ ಸಂಘ ತಿಮ್ಮರಾಯಗೌಡನ ಕೆರೆ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಸ್ಥಳ ಪರಿಶೀಲಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಎಂ.ಮಂಜುನಾಥ್, ತಹಸೀಲ್ದಾರ್, ಮಾಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net