

ಪಡುಬಿದ್ರಿ: ಪಾಂಗಾಳ ಮಟ್ಟು ಎಂಬಲ್ಲಿ ಪಾಪನಾಶಿನಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಮೂವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. ರಾಜೇಶ್, ಸತೀಶ್, ಅರವಿಂದ ಎಂಬುವರು ಪಾಪನಾಶಿನಿ ನದಿಯಿಂದ ಮರಳು ಅಗೆಯುತ್ತಿದ್ದ ಸಂದರ್ಭ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದು, ಈ ಸಂದರ್ಭ ನಾಲ್ಕು ಯುನಿಟ್ ಮರಳು ಸಂಗ್ರಹಿಸಿದ್ದು ಪತ್ತೆಯಾಗಿದೆ. ಉತ್ತರ ಭಾರತದ ಕೂಲಿ ಕಾರ್ಮಿಕರನ್ನು ಬಳಸಿ ನದಿಯಿಂದ ಮರಳನ್ನು ಸಂಗ್ರಹಿಸಲಾಗುತ್ತಿದ್ದು, ನಸುಕಿನಲ್ಲಿ ವೇಳೆ ಟೆಂಪೋವಿನಲ್ಲಿ ಸಾಗಿಸಲಾಗುತ್ತಿತ್ತು. ಜತೆಗೆ ಪರವಾನಗಿಯನ್ನೂ ಹೊಂದಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿದ್ದ ದೋಣಿ, ಮರಳು ಸಹಿತ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.