ಮದ್ಯ ಅಕ್ರಮ ಮಾರಾಟ ತಡೆಯಿರಿ, ಮಂಡಲಮರಿಯಲ್ಲಿ ಗ್ರಾಮಸ್ಥರ ಹೋರಾಟ

struggle of Mandalamari villagers
ಯಲಬುರ್ಗಾ ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಮದ್ಯದ ಪೌಚ್ ಹಾಗೂ ಬಾಟಲಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸೋಮಲಿಂಗಪ್ಪ ಕುರಿ, ವೀರಭದ್ರಪ್ಪ ಪತ್ತಾರ, ವೀರನಗೌಡ ಪೊಲೀಸ್ ಪಾಟೀಲ್, ವೀರಪ್ಪ ಮುಂಡರಗಿ ಇತರರಿದ್ದರು.
Published on

ಯಲಬುರ್ಗಾ: ಮದ್ಯ ಅಕ್ರಮ ಮಾರಾಟ ತಡೆಯುವಂತೆ ಆಗ್ರಹಿಸಿ ತಾಲೂಕಿನ ಮಂಡಲಮರಿಯಲ್ಲಿ ಗ್ರಾಮಸ್ಥರು ಮದ್ಯದ ಬಾಟಲಿ ಹಾಗೂ ಪೌಚ್‌ಗಳೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದ ಅನೇಕ ಕುಟುಂಬಗಳಲ್ಲಿ ಕೌಟುಂಬಿಕ ಕಲದ ಉಂಟಾಗುತ್ತಿದೆ. ಈ ಕುರಿತು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಈ ಕೃತ್ಯಕ್ಕೆ ಅಧಿಕಾರಿಗಳೇ ಪರೋಷವಾಗಿ ಸಾಥ್ ನೀಡುತ್ತಿದ್ದಾರೆ ಎಂದು ದೂರಿದರು.

ವಯಸ್ಕರಲ್ಲದೇ ಮಕ್ಕಳೂ ಸಹ ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬೇರೆ ಕಡೆಯಿಂದ ಮದ್ಯ ತರಿಸಿ ಅನೇಕ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಬಕಾರಿ ಇನ್ಸ್‌ಪೆಕ್ಟರ್ ಶಂಕರ ದೊಡ್ಮನಿಗೆ ಫೋನ್ ಕರೆ ಮಾಡಿ ತಿಳಿಸಿದರೆ ನಿಮ್ಮೂರಿಗೆ ಬರಲು ವಾಹನವಿಲ್ಲವೆಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಬೇಕು. ಇಲ್ಲವಾದರೆ ಅಬಕಾರಿ ಕಚೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯ ಸೋಮಲಿಂಗಪ್ಪ ಕುರಿ ಹಾಗೂ ಗ್ರಾಮಸ್ಥ ವೀರಭದ್ರಪ್ಪ ಪತ್ತಾರ ಆಕ್ರೋಶ ಎಚ್ಚರಿಸಿದರು.

ಸ್ಥಳಕ್ಕಾಗಮಿಸಿದ ಯಲಬುರ್ಗಾ ಎಎಸ್‌ಐ ಇಮಾಂ ಹುಸೇನ್ ಯಲಬುರ್ಗಿ, ಮುದ್ಯ ಅಕ್ರಮ ಸಾಗಣೆ ಮತ್ತು ಮಾರಾಟಗಾರರ ವಿರುದ್ಧ ಎರಡು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಹೋರಾಟ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪ್ರಮುಖರಾದ ವೀರನಗೌಡ ಪೊಲೀಸ್ ಪಾಟೀಲ್, ವೀರಪ್ಪ ಮುಂಡರಗಿ, ಗಂಗಪ್ಪ ಜೂಲಕಟ್ಟೆ, ಗುರಪ್ಪ ಗಡ್ಡದ, ಶಿವಪ್ಪ ಯಲಬುರ್ತಿ, ಮೌನೇಶ್ ಬಡಿಗೇರ, ಸಿದ್ದಪ್ಪ ಬಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net