ಬಂಗಾರಪೇಟೆ: ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ಹುನಕುಂದ, ಕಂಗಾನಲ್ಲೂರು, ಹುಲಿಬೆಲೆ, ಪಟ್ನ, ಕೆಜಿಎಫ್ ತಾಲೂಕಿನ ಬಡವಾಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಚಿಲ್ಲರೆ ಅಂಗಡಿ, ದಿನಸಿ, ಟೀ ಅಂಗಡಿ, ಪಾನ್‌ಶಾಪ್‌ಗಳು ಸೇರಿ ಕೆಲ ಮನೆಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಸುಲಭವಾಗಿ ಗ್ರಾಮಗಳಲ್ಲೇ ಮದ್ಯ ಸಿಗುತ್ತಿರುವುದರಿಂದ ಜನರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಹಲವೆಡೆ ಗಾಂಜಾ ಮಾರಾಟವೂ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಚಟಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ಬಗ್ಗೆ ದಲಿತ ಮುಖಂಡರು ದೂರು ಸಲ್ಲಿಸಿದ್ದು, ಶಾಸಕರು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಮದ್ಯ ಅಕ್ರಮ ಮಾರಾಟ ಮಾಡುವವರನ್ನು ಗ್ರಾಮಸ್ಥರು ಪ್ರಶ್ನಿಸಿದರೆ, ಸಂಬಂಧಪಟ್ಟವರಿಗೆ ನಾವು ಪ್ರತಿ ತಿಂಗಳು ಮಾಮೂಲಿ ನೀಡುತ್ತೇವೆ ಎನ್ನುತ್ತಾರೆ. ಅಲ್ಲದೆ ಅಬಕಾರಿ ಅಧಿಕಾರಿಗಳು ದಾಳಿಗೆ ಬರುವ ಮುನ್ನವೇ ಇವರಿಗೆ ಮಾಹಿತಿ ರವಾನೆಯಾಗುವುದರಿಂದ ಅಧಿಕಾರಿಗಳು ಬಂದಾಗ ತಮ್ಮ ಅಂಗಡಿಗಳನ್ನು ಬಂದ್ ಮಾಡಿರುತ್ತಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಮದ್ಯ ಅಕ್ರಮ ಮಾರಾಟದ ಮಾಹಿತಿ ನೀಡಿದಲ್ಲಿ ಕೂಡಲೇ ದಾಳಿ ನಡೆಸಿ, ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಮದ್ಯ ಅಕ್ರಮ ಮಾರಾಟಗಾರರಿಗೆ ಹೆಚ್ಚಿನ ಪ್ರವಾಣದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ.
ಶಶಿಕಲಾ, ಅಬಕಾರಿ ನಿರೀಕ್ಷಕಿ ಬಂಗಾರಪೇಟೆ
ಹಲವು ಬಾರಿ ದೂರು ನೀಡಿದರು ಅಬಕಾರಿ ಅಧಿಕಾರಿಗಳು, ಜನಪ್ರತಿನಿಧಿ ಗಳ ಕುಮ್ಮಕ್ಕಿನಿಂದ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಯುವಕರು ಮದ್ಯ ವ್ಯಸನಿಗಳಾಗಿ ಸೋಮಾರಿಗಳಾಗುತ್ತಿದ್ದಾರೆ. ಗ್ರಾಮಗಳಲ್ಲಿ ಕ್ಲುಲಕ ಕಾರಣಗಳಿಗೆ ಗಲಾಟೆಗಳಾಗುತ್ತಿವೆ. ನೆಮ್ಮದಿ ಕಳೆದುಹೋಗಿದೆ.
ನಾರಾಯಣಸ್ವಾಮಿ, ಬಡಮಾಕನಹಳ್ಳಿ ರೈತ