

ಎಂ.ರಾಮೇಗೌಡ ನಂದಗುಡಿ
ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ವೇರ್ಹೌಸ್ ನಿರ್ಮಿಸಲು ರೈತರಿಂದ ಜಮೀನು ಖರೀದಿಸಿರುವ ಖಾಸಗಿ ಕಂಪನಿಯೊಂದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ 15ಕ್ಕೂ ಹೆಚ್ಚು ಅಡಿ ಅಳದಲ್ಲಿ ಸಿಡಿಮದ್ದುಗಳನ್ನಿಟ್ಟು ಬಂಡೆಗಳನ್ನು ಸ್ಫೋಟಿಸಿದೆ.
ನಂದಗುಡಿ ಸರ್ವೇ ನಂ.160, 161, 162,163, 165ರಲ್ಲಿ ಒಟ್ಟು 43 ಎಕರೆಯಲ್ಲಿ ಖಾಸಗಿ ವೇರ್ ಹೌಸಿಂಗ್ ಕಂಪನಿ ವೇರ್ ಹೌಸ್ ನಿರ್ಮಿಸುತ್ತಿದ್ದು, ಕಳೆದೆರಡು ತಿಂಗಳಿನಿಂದ ಹಾಡಹಗಲೇ ಸಿಡಿಮದ್ದು ಬಳಸಿ ಬಂಡೆ ಸಿಡಿಸುತ್ತಿದ್ದಾರೆ, ವೇರ್ಹೌಸ್ ನಿರ್ಮಿಸುವ ಸನಿಹದಲ್ಲೇ ಹಳೇಊರು ಹಾಗೂ ಜನವಸತಿ ಪ್ರದೇಶವಿದ್ದು, ಸಿಡಿಲಾರ್ಭಟಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.
ವೇರ್ಹೌಸ್ ನಿರ್ಮಿಸುತ್ತಿರುವ ಮಾಲೀಕರು ಸರ್ವೇ ನಂ.159ರ 38 ಗುಂಟೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರಿ ಜಾಗದಲ್ಲಿ ನೀರು ಸೇದುವ ಬಾವಿ ಹಾಗೂ ಮುನೇಶ್ವರ ಗುಡಿ ಇದೆ. ನೂರಾರು ವರ್ಷಗಳಿಂದ ಹಳೇಊರು ಗ್ರಾಮಸ್ಥರು ಈ ಜಾಗದಲ್ಲಿ ಮುನೇಶ್ವರ ಸ್ವಾಮಿಗೆ ಪಚ್ಚೆ ಇಟ್ಟು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ವೇರ್ಹೌಸ್ ನಿರ್ಮಿಸುತ್ತಿರುವ ಮಾಲೀಕರು ನಂದಗುಡಿ ಅರಣ್ಯ ಪ್ರದೇಶದಿಂದ ಹಾದು ಹೋಗಿರುವ ರಾಜಕಾಲುವೆ ಮುಚ್ಚಿ ಹಾಕಿದ್ದು, ಈ ಭಾಗದ ಕೆರೆಗಳಿಗೆ ನೀರು ಹರಿಯದಂತೆ ತಡೆಯೊಡ್ಡಿದ್ದಾರೆ. ರೈತರು ಜಮೀನುಗಳಿಗೆ ಹೋಗಲು ಅವಕಾಶ ನೀಡದಂತೆ ಕಾಂಪೌಂಡ್ ನಿರ್ಮಿಸುತ್ತಿದ್ದು, ಕೃಷಿ ಚಟುವಟಿಕೆ ನಡೆಸಲು ರೈತರಿಗೆ ತೊಂದರೆಯಾಗುತ್ತಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.
ಶನಿವಾರ ಮತ್ತೆ ಕೆಲಸ ಶುರು! : ರೈತರಿಂದ ಜಮೀನು ಖರೀದಿಸಿರುವ ಖಾಸಗಿ ಕಂಪನಿಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ 15ಕ್ಕೂ ಹೆಚ್ಚು ಅಡಿ ಅಳದಲ್ಲಿ ಸಿಡಿಮದ್ದುಗಳನ್ನಿಟ್ಟು ಬಂಡೆಗಳನ್ನು ಸ್ಫೋಟಿಸಿರುವ ವಿಷಯ ಗ್ರಾಮಸ್ಥರಿಂದ ತಿಳಿದು ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕೆಲಸ ಸ್ಥಗಿತ ಮಾಡಿಸಿ ಹೋಗಿದ್ದಾರೆ. ಆದರೆ ಅಧಿಕಾರಿಗಳು ಅಲ್ಲಿಂದ ಹೋಗುತ್ತಿದ್ದಂತೆ ಶನಿವಾರ ಮತ್ತೆ ಇಟಾಚಿಗಳ ಮೂಲಕ ಕೆಲಸ ಆರಂಭಿಸಲಾಗಿದೆ.
ದೂರು ನೀಡಿದರೂ ಕ್ರಮವಿಲ್ಲ... : ನಂದಗುಡಿ ಭಾಗದಲ್ಲಿ ಖಾಸಗಿಯವರು ವೇರ್ಹೌಸ್ ನಿರ್ಮಿಸಲು ಕ್ರಯಕ್ಕೆ ಪಡೆದ ಜಮೀನುಗಳಲ್ಲಿ ಸಕಾರದ ಅನುಮತಿ ಪಡೆಯದೆ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಭಾರೀ ಶಬ್ಧದಿಂದ ಹಳೇಊರು ಗ್ರಾಮದಲ್ಲಿರುವ ಮನೆಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ. ಜನರೂ ಭಯಭೀತರಾಗಿದ್ದಾರೆ. ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ್ದರೂ ಇದುವರೆಗೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಹಳೇಊರು ಗ್ರಾಮಸ್ಥ ಅನಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ವೇರ್ ಹೌಸಿಂಗ್ ಕಂಪನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೆ ಬಂಡೆಗಳನ್ನು ಸ್ಫೋಟಿಸುತ್ತಿದೆ ಎಂದು ಸ್ಥಳಿಯರು ದೂರು ನೀಡಿದ್ದರು. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡಿ, ಕೆಲಸ ಸ್ಥಗಿತ ಮಾಡಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. > ಸವಿತಾ ಜಿಲ್ಲಾ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ, ಗ್ರಾಮಾಂತರ ಜಿಲ್ಲೆ ಗ್ರಾಮದ ಸರ್ವೇ ನಂ.159ರ 38 ಗುಂಟೆ ಸರ್ಕಾರಿ ಜಾಗದಲ್ಲಿ ಮುನೇಶ್ವರ ಗುಡಿ ಇದೆ, ಇದೇ ಜಾಗದಲ್ಲಿ ಪುರಾತನ ನೀರು ಸೇದುವ ಬಾವಿ ಕೂಡ ಇದೆ. ಈ ಭಾಗದ ರಾಜಕಾಲುವೆಯನ್ನು ಖಾಸಗಿ ಕಂಪನಿಯವರು ಒತ್ತುವರಿ ಮಾಡಿಕೊಂಡು ಮುನೇಶ್ವರ ಗುಡಿಗೆ ಪೂಜೆ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ. > ವೆಂಕಟೇಶ್ ಗ್ರಾಮಸ್ಥ ಹಳೇಊರು ಸರ್ಕಾರಿ ಭೂಮಿ ಹಾಗೂ ರಾಜಕಾಲುವೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೇ ತೆರವುಗೊಳಿಸಲಾಗುವುದು. ಒತ್ತುವರಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. > ಮಂಜುನಾಥ್ ಉಪ ತಹಸೀಲ್ದಾರ್, ನಂದಗುಡಿ