

ಗಜೇಂದ್ರಗಡ: ಪಟ್ಟಣದ ಸಮೀಪದ ಗೌಡಗೇರಿ ಗ್ರಾಮದ ಸರಹದ್ದಿನ ಗೋದಾಮಿನಲ್ಲಿ ಸಂಗ್ರಹಿಸಿದ ಅಕ್ರಮ ಪಡಿತರ ಅಕ್ಕಿಯನ್ನು ಜಿಲ್ಲಾ ಸಿಇಎನ್ ಪೊಲೀಸರು ಹಾಗೂ ಅಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿ ಅಲ್ಲಿರುವ ಅಕ್ಕಿಯನ್ನು ವಶಕ್ಕೆ ಪಡೆದು ಸಂಬಂದಪಟ್ಟವರ ವಿರುದ್ಧ ಭಾನುವಾರ ಪ್ರಕರಣ ದಾಖಲು ಮಾಡಿದ್ದಾರೆ.
ಪೊಲೀಸ್ ಹಾಗೂ ಅಹಾರ ಇಲಾಖೆಯವರು ದಾಳಿ ನಡೆಸಿದ ದಾಳಿಯಲ್ಲಿ ಒಟ್ಟು 130 ಕ್ವಿಂಟಾಲ್ 90 ಕೆಜಿ ಅಕ್ಕಿ ದೊರೆತಿದ್ದು ಅಂದಾಜು ಮೌಲ್ಯ 4.45060 ರೂ ಗಳಷ್ಟು ಪಡಿತರ ಅಕ್ಕಿ ದೊರೆತಿದೆ ಎಂದು ತಾಲೂಕು ಆಹಾರ ನಿರೀಕ್ಷಕ ಅಧಿಕಾರಿ ಮಂಜುನಾಥ ತಳ್ಳಿಹಾಳ ದಾಖಲಿಸಿದ ಪ್ರಕರಣದಲ್ಲಿ ತಿಳಿದು ಬಂದಿದೆ.
ಮಹೇಶ ಈಶ್ವರಪ್ಪ ಪತಂಗರಾಯ ಎಂಬುವವರ ಒಡೆತನದ ಗೌಡಗೇರಿ ಸರಹದ್ದಿನ ಸರ್ವೇ ನಂ.35 ರ ಗೋದಾಮಿನಲ್ಲಿ ಅಕ್ಕಿಯನ್ನು ಸಂಗ್ರಹ ಮಾಡಲಾಗಿತ್ತು. ಈ ಗೋದಮನ್ನು ಸಂಗಪ್ಪ ಯಲಿಗಾರ ಎಂಬುವವರಿಗೆ ಬಾಡಿಗೆ ನೀಡಲಾಗಿತ್ತು. ಅವರ ವೈಯಕ್ತಿಕ ಲಾಭಕ್ಕಾಗಿ ಅಕ್ಕಿ ದಂಧೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿತ ಸಂಗಪ್ಪ ಯಲಿಗಾರ ನಾಪತ್ತೆಯಾಗಿದ್ದು ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.